ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಸುರತ್ಕಲ್: ತಿಂಗಳ ಹಿಂದೆ ಕಳ್ಳತನ ಮಾಡಿ, ಅಪಾರ ಹಣ ಮತ್ತು ಚಿನ್ನ ಹೊತ್ತೊಯ್ದ ಒಂದು ಅಂತರ್‌ರಾಜ್ಯ ಕಳ್ಳರ ತಂಡವನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದು, ಕೇರಳ ಮತ್ತು ಕರ್ನಾಟಕ ಕರಾವಳಿಯ ವ್ಯಕ್ತಿಗಳು ಈ ತಂಡದ ಸದಸ್ಯರಾಗಿದ್ದಾರೆ.
ಸೇನೆಯಿಂದ ನಿವೃತ್ತರಾದ ಒಬ್ಬ ವ್ಯಕ್ತಿಯೂ ಈ ಸಂಚು ರೂಪಿಸುವುದರಲ್ಲಿ ಭಾಗಿಯಾಗಿದ್ದು ಆತನನ್ನೂ ಅರೆಸ್ಟ್ ಮಾಡಲಾಗಿದೆ.
ಬಂಧಿತರಿಂದ 30 ಲಕ್ಷ 85 ಸಾವಿರ 710 ರೂ., 224 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದು, ಉಳಿದ ಸಂಪತ್ತನ್ನು ಆರೋಪಿಗಳು ಖರ್ಚು ಮಾಡಿದ್ದಾರೆ.
ಆಗಸ್ಟ್ 17ರಂದು ಸುರತ್ಕಲ್ ಬಳಿಯ ಇಡ್ಯಾ ಗ್ರಾಮದ ಜಾರ್ಡಿನ್ ಅಪಾರ್ಟ್ಮೆಂಟಿನ ನಿವಾಸಿ ವಿದ್ಯಾಪ್ರಭು ಎನ್ನುವವರ ಮನೆಯನ್ನು ಬಾಲ್ಕನಿ ಮೂಲಕ ಪ್ರವೇಶಿಸಿದ್ದ ಕಳ್ಳರು ಅಪಾರ ಹಣ ಮತ್ತು ಚಿನ್ನವನ್ನು ಕದ್ದಿದ್ದರು. ತನಿಖೆ ಆರಂಭಿಸಿದ್ದ ಸುರತ್ಕಲ್ ಪೊಲೀಸರು, ಸೆ. 15ರಂದು ಕೇರಳದ ತಿರುವನಂತಪುರಂನ ರಘು ಮತ್ತು ಅಮೇಶ್ ಎಂಬಿಬ್ಬರನ್ನು ಬಂಧಿಸಿದ್ದರು.
ಅದೇ ಅಪಾರ್ಟ್ಮೆಂಟಿನ ನಿವಾಸಿ, ಅಪಾರ್ಟ್ಮೆಂಟಿನ ಸೆಕ್ರೆಟರಿಯೂ ಆಗಿರುವ ಮತ್ತು ಸ್ಥಳೀಯ ಬಾರ್/ವೈನ್‌ಶಾಪ್‌ನಲ್ಲಿ ಮ್ಯಾನೇಜರ್ ಆಗಿರುವ ನವೀನ್ ಮತ್ತು ಬಾರ್‌ನಲ್ಲಿ ವೇಟರ್ ಆಗಿರುವ ಬೆಳ್ತಂಗಡಿಯ ಸಂತೋಷ್ ಈ ಕಳ್ಳತನದ ಸಂಚಿನಲ್ಲಿ ಭಾಗಿಯಾಗಿದ್ದರು ಎಂಬುದು ವಿಚಾರಣೆ ವೇಳೆ ತಿಳಿದು ಬಂದಿತ್ತು. ಸದ್ಯ ಇವರಿಬ್ಬರನ್ನೂ ಬಂಧಿಸಲಾಗಿದ್ದು, ನವೀನ್ ಸೇನೆಯಲ್ಲಿ ಕೆಲಸ ಮಾಡಿ ನಿವೃತ್ತಿ ಪಡೆದಿದ್ದಾನೆ ಎನ್ನಲಾಗಿದೆ.
ಇನ್ನಿಬ್ಬರು ಕೇರಳ ಮೂಲದ ಆರೋಪಿಗಳಿಗಾಗಿ ಪೊಲೀಸರು ಶೊಧ ನಡೆಸಿದ್ದಾರೆ. ಕದ್ದ ಹಣದಲ್ಲಿ ಸಾಕಷ್ಟು ಹಣವನ್ನು ಆರೋಪಿಗಳು ಮಜಾ ಮಾಡಿ, ವೈಯಕ್ತಿಕ ಕೆಲಸಕ್ಕೆ ಬಳಸಿಕೊಂಡಿದ್ದಾರೆ. ಉಳಿದ ಹಣ, ಚಿನ್ನವನ್ನು ವಶಪಡಿಸಿಕೊಂಡ ಪೊಲೀಸರು ವಾರಸುದಾರರಿಗೆ ನೀಡಿದ್ದಾರೆ.