ವಿಜಯಸಾಕ್ಷಿ ಸುದ್ದಿ, ನರಗುಂದ:
ತಾಲೂಕಿನ ಚಿಕ್ಕನರಗುಂದ ಗ್ರಾಮದ ಕೆಪಿಎಸ್ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಕ್ಕೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಮುತ್ತು ರಾಯರಡ್ಡಿ ಭೇಟಿ ನೀಡಿ, ಪ್ರೌಢಶಾಲೆ ವತಿಯಿಂದ ನೀಡಿದ ಪೆನ್, ಮಾಸ್ಕ್‌ಗಳನ್ನು ಪರೀಕ್ಷಾರ್ಥಿಗಳಿಗೆ ವಿತರಿಸಿ ಶುಭ ಹಾರೈಸಿದರು.
ನರಗುಂದ ಪೊಲೀಸ್ ಠಾಣೆಯ ಸಿಪಿಐ ಜಯಂತ್ ಗೌಳಿ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ತಿಳಿಸಿದರು.
ಸೋಮವಾರದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಆರಂಭವಾಗುವ ಹಿನ್ನೆಲೆಯಲ್ಲಿ ರವಿವಾರವೇ ಗ್ರಾಮ ಪಂಚಾಯತಿ ವತಿಯಿಂದ ಪರೀಕ್ಷಾ ಕೇಂದ್ರದ ಕೊಠಡಿಗಳಿಗೆ ಗ್ರಾಪಂ ಪಿಡಿಒ ಶೈನಾಜ್ ಮುಜಾವರ ಅವರು ಸಿಬ್ಬಂದಿಗಳಿಂದ ಸ್ಯಾನಿಟೈಸ್ ಮಾಡಿಸಿ, ಸ್ವಚ್ಚಗೊಳಿಸಿದ್ದರು.
ಇನ್ನು, ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಮುಂಜಾಗೃತಾ ಕ್ರಮವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪ್ರಶಾಂತ್ ಮಲ್ಲಾಪೂರ ಅವರು ಪ್ರತಿ ವಿದ್ಯಾರ್ಥಿಗಳನ್ನು ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡಿಸಿದರು. ಅದರಂತೆ, ಸೋಮವಾರ ನಡೆದ ಪರೀಕ್ಷೆ ಶಾಂತಿ ಹಾಗೂ ನಿರ್ಭೀತಿಯಿಂದ ನಡೆಯಲು ಸಹಕರಿಸಿದ ಪರೀಕ್ಷಾ ಮೇಲ್ವಿಚಾರಕರು, ಮುಖ್ಯ ಅಧೀಕ್ಷಕರು, ಪೊಲೀಸ್ ಸಿಬ್ಬಂದಿ, ಆರೋಗ್ಯ ಸಿಬ್ಬಂದಿ, ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮುತ್ತು ರಾಯರಡ್ಡಿ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ ಐ.ಎಂ.ಹುರಕಡ್ಲಿ, ಎಸ್‌ಡಿಎಂಸಿ ಅಧ್ಯಕ್ಷ ಶರಣಬಸಪ್ಪ ಹಳೇಮನಿ ಸೇರಿದಂತೆ ಅನೇಕರು ಇದ್ದರು.