ವಿಜಯಸಾಕ್ಷಿ ಸುದ್ದಿ, ಗದಗ
ಮದುವೆ ಮಾಡದ್ದಕ್ಕೆ ಕೋಪಗೊಂಡು ತಂದೆಯ ಮೇಲೆ ಕೊಡಲಿಯಿಂದ ಮಾರಣಾಂತಿಕ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ ಮಗನಿಗೆ ಎರಡು ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ಗದಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಗದಗ ಜಿಲ್ಲೆಯ ರೋಣ ತಾಲೂಕಿನ ಬೆಳವಣಿಕಿ ಗ್ರಾಮದ ರವಿ ಮಲ್ಲಪ್ಪ ಸುಣಗದ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಮದುವೆ ಮಾಡುವಂತೆ ರವಿ ತಂದೆಯೊಂದಿಗೆ ಮೇಲಿಂದ ಮೇಲೆ ಜಗಳವಾಡುತ್ತಿದ್ದ.
ಇದೇ ವಿಷಯಕ್ಕೆ 2020ರ ಮೇ 28ರಂದು ರಾತ್ರಿ 8 ಗಂಟೆಯ ಸುಮಾರಿಗೆ ತಕರಾರು ತೆಗೆದು, ಕೊಡಲಿಯಿಂದ ತಲೆ, ಕುತ್ತಿಗೆಯ ಹಿಂಭಾಗದಲ್ಲಿ ಕಡಿದು ಗಂಭೀರ ಗಾಯಗೊಳಿಸಿದ್ದ. ಈ ಬಗ್ಗೆ ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ತನಿಖೆ ನಡೆಸಿದ ಪಿಎಸ್ಐ ವಿನೋದ ಪೂಜಾರಿ, 24-8-2020ರಂದು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಗದಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 3-9-2021ರಂದು ರವಿ ಸುಣಗದನಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.
ಸರ್ಕಾರಿ ಅಭಿಯೋಜಕರಾಗಿ ನ್ಯಾಯವಾದಿ ಸವಿತಾ ಶಿಗ್ಲಿ ವಾದ ಮಂಡಿಸಿದ್ದರು.
ಪ್ರಕರಣದ ತನಿಖೆ ನಡೆಸಿದ ಪಿಎಸ್ಐ ಹಾಗೂ ಸಿಬ್ಬಂದಿಯ ಕಾರ್ಯಕ್ಕೆ ಎಸ್ಪಿ ಯತೀಶ್ ಎನ್ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.