- ಕಾಂಗ್ರೆಸ್ ಜೊತೆ ಮೈತ್ರಿ ಮುರಿದುಕೊಳ್ಳುವ ಸುಳಿವು ನೀಡಿದ ಶಾಸಕ ಸಾ.ರಾ. ಮಹೇಶ್
ವಿಜಯಸಾಕ್ಷಿ ಸುದ್ದಿ, ಮೈಸೂರು
ಸಹಕಾರ ಸಚಿವ ಎಸ್.ಟಿ. ಸೋಮಶೇಖರ್- ಜೆಡಿಎಸ್ ಮುಖಂಡ ಸಾ.ರಾ. ಮಹೇಶ್ ಭೇಟಿ ಬಳಿಕ ಮೈಸೂರು ಮಹಾನಗರ ಪಾಲಿಕೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಕಾಂಗ್ರೆಸ್- ಜೆಡಿಎಸ್ ಮೈತ್ರಿ ಮುರಿದುದ್ದು, ಬಿಜೆಪಿಗೆ ಮೇಯರ್ ಸ್ಥಾನ ಒಲಿಯುವ ಸಾಧ್ಯತೆಗಳು ಇದೆ.
ಮೇಯರ್ ಸ್ಥಾನದ ವಿಚಾರವಾಗಿ ಕೋರ್ಟ್ ಗೆ ಹೋಗುವ ತನಕ ಮಾತ್ರ ಕಾಂಗ್ರೆಸ್ ಜೊತೆಗೆ ಮೈತ್ರಿ ಇತ್ತು. ಆನಂತರ ನಾವು ಅವರ ಜೊತೆಗಿಲ್ಲ. ಅವರೊಂದಿಗೆ ಮೈತ್ರಿ ಆಗ್ತೇವೆ ಎಂದು ಎಲ್ಲೂ ಹೇಳಿಲ್ಲ.
ಮೇಯರ್ ಚುನಾವಣೆಯಲ್ಲಿ ಜೆಡಿಎಸ್ ತಟಸ್ಥವಾಗಿ ಉಳಿದರೂ ಆಶ್ಚರ್ಯವಿಲ್ಲ. ಹತ್ತು ವರ್ಷ ಮೇಯರ್ ಸ್ಥಾನದಲ್ಲಿ ನಾವೇ ಇದ್ದೆವು ಎಂದು ಸಚಿವ ಸೋಮಶೇಖರ ಭೇಟಿಯ ಬಳಿಕ ಮೈಸೂರಿನಲ್ಲಿ ಶಾಸಕ ಸಾ.ರಾ.ಮಹೇಶ ಹೇಳಿದ್ದಾರೆ.
ಜೆಡಿಎಸ್ ಸಹಕಾರ ಕೋರಿದ ಸಹಕಾರ ಸಚಿವ..!
ನಿನ್ನೆ ತಡರಾತ್ರಿ ಜೆಡಿಎಸ್ ಶಾಸಕ ಸಾ.ರಾ ಮಹೇಶ್ ಕಚೇರಿಗೆ ಬಿಜೆಪಿ ಸಚಿವರ ನಿಯೋಗ ಭೇಟಿ ನೀಡಿ ಮಾತುಕತೆ ನಡೆಸಿತು. ಮೇಯರ್ ಸ್ಥಾನಕ್ಕೆ ಸಹಕಾರ ನೀಡುವಂತೆ ಸಚಿವರ ನಿಯೋಗ ಮನವಿ ಮಾಡಿತು.
ಸಚಿವರಿಗೆ ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್.ನಾಗೇಂದ್ರ, ನಗರಾಧ್ಯಕ್ಷ ಶ್ರೀವತ್ಸ ಸಾಥ್ ನೀಡಿದರು.
ಸಾ.ರಾ. ಮಹೇಶ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಎಚ್.ಟಿ.ಸೋಮಶೇಖರ, ಸದ್ಯ ಸೌಹಾರ್ದಯುತವಾಗಿ ಶಾಸಕ ಸಾ.ರಾ ಮಹೇಶ್ ಅವರನ್ನ ಭೇಟಿ ಮಾಡಿದ್ದೇವೆ.
ಪಾಲಿಕೆಯಲ್ಲಿ ಬಿಜೆಪಿ ಬೆಂಬಲಿಸುವ ಬಗ್ಗೆ ಇನ್ನೆರಡು ದಿನಗಳಲ್ಲಿ ಅಭಿಪ್ರಾಯ ತಿಳಿಸಲಿದ್ದಾರೆ. ಅವರು ಸಹ ನಮ್ಮಂತೆಯೇ ಸದಸ್ಯರ ಅಭಿಪ್ರಾಯ ಸಂಗ್ರಹಿಸಬೇಕು. ಬಳಿಕ ಅವರ ಪಕ್ಷದ ಹೈಕಮಾಂಡ್ ಬಳಿ ಚರ್ಚಿಸಬೇಕು.
ಅವರೊಬ್ಬರೇ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ. ಎಲ್ಲ ಪ್ರಕ್ರಿಯೆಗಳು ನಡೆಯಬೇಕು. ನಮ್ಮ ಪಕ್ಷದ ರಾಜ್ಯಾಧ್ಯಕ್ಷರು-ಜೆಡಿಎಸ್ ರಾಜ್ಯಾಧ್ಯಕ್ಷರು ಮಾತುಕತೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.