ವಿಜಯಸಾಕ್ಷಿ ಸುದ್ದಿ, ಹಾಸನ
ಕೊರೊನಾ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ವಿಫಲವಾಗುತ್ತಿವೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಬರೀ ಸುಳ್ಳುಗಳನ್ನು ಹೇಳುತ್ತಿದ್ದಾರೆ. ದೆಹಲಿಯಲ್ಲಿ ಹತ್ತು ಸಾವಿರ ಬೆಡ್ ನಿರ್ಮಾಣ ಮಾಡಿದ್ದೇವೆ ಎಂದು ಸುಳ್ಳು ಹೇಳಿದ್ದಾರೆ. ಬಜೆಟ್ ನಲ್ಲಿ ರೂ. 35 ಸಾವಿರ ಕೋಟಿ ಅನುದಾನ ಮೀಸಲಿಡಲಾಗಿದೆ ಎಂದು ಹೇಳಿದ್ದರು. ಬಜೆಟ್ ಅಪ್ರೂವಲ್ ಕೂಡ ಆಗಿದೆ. ಆದರೆ, ಆ ದುಡ್ಡು ಎಲ್ಲಿಗೆ ಹೋಗಿದೆ ಎಂಬುವುದೇ ತಿಳಿಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲಸಿಕೆಗೆ ಸರ್ಕಾರವು ರೂ. 400 ನ್ನು ನಿಗದಿ ಮಾಡಿದೆ. ಇನ್ನೊಂದೆಡೆ ಜಿಎಸ್ ಟಿ ಕೂಡ ಕೊಡುತ್ತಿಲ್ಲ. ಆಕ್ಸಿಜನ್ ಹೆಚ್ಚುವರಿ ಕೇಳಿದರೆ ನಮ್ಮ ವಿರುದ್ದ ಸುಪ್ರೀಂಕೋರ್ಟ್ ನಲ್ಲಿ ಕೇಸ್ ಹಾಕುತ್ತಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಏಕೆ ಸರ್, ಕರ್ನಾಟಕದ ಜನತೆ ಏನು ತಪ್ಪು ಮಾಡಿದೆ ನಿಮಗೆ? ಯಾವ ಅನ್ಯಾಯ ಮಾಡಿದ್ದಾರೆ? 25 ಸಂಸದರನ್ನು ಕೊಟ್ಟಿದ್ದು ತಪ್ಪಾ ನಿಮಗೆ. ಸ್ವರ್ಗಾನೇ ಇಳಿಸುತ್ತಾರೆಂದು ಮಾತನಾಡುತ್ತಿದ್ದ ರಾಜ್ಯ ಬಿಜೆಪಿ ನಾಯಕರು, ಈಗ ಜನರ ನೋವು ಕಂಡು ಏನು ಹೇಳುತ್ತಾರೆ? ಎಂದು ಪ್ರಜ್ವಲ್ ರೇವಣ್ಣ ಪ್ರಶ್ನಿಸಿದ್ದಾರೆ.
ಸದ್ಯದ ಅಂಕಿ – ಅಂಶಗಳನ್ನು ಗಮನಿಸಿದರೆ ಇಡೀ ದೇಶದಲ್ಲಿ ಅತಿಹೆಚ್ಚು ಸೋಂಕಿತರು ರಾಜ್ಯದಲ್ಲಿ ಪತ್ತೆಯಾಗುತ್ತಿದ್ದಾರೆ. ಸ್ಮಶಾನದಲ್ಲಿ ಕಿಲೋಮೀಟರ್ ಗಟ್ಟಲೆ ಕ್ಯೂ ಇದೆ. ಕೂಡಲೇ ಈ ರಾಜ್ಯದಲ್ಲಿ ಪ್ರಧಾನಿ ನೋಡಬೇಕು ಎಂದು ಮನವಿ ಮಾಡಿದ್ದಾರೆ.