ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿ ನಂಜನಗೂಡು ದೇವಸ್ಥಾನದಲ್ಲಿ ಪೂಜಾ ವಿಧಿ- ವಿಧಾನ ನೆರವೇರಿಸಿದ್ದ ಸಿಎಂ ಯಡಿಯೂರಪ್ಪ ಅವರು ಪುತ್ರ ಬಿ.ವೈ. ವಿಜಯೇಂದ್ರ ವಿರುದ್ಧ ಕೈಗೊಂಡ ಕ್ರಮಗಳ ಕುರಿತು ವಿವರಣೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ಲೆಟ್ಜ್ ಕಿಟ್ ಫೌಂಡೇಷನ್ ಸಲ್ಲಿಸಿರುವ ಪಿಐಎಲ್, ಸಿ.ಜೆ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತು. ಮೂಲ ಅರ್ಜಿಗೆ ಮೆಮೋ ಸಲ್ಲಿಸಿರುವ ವಕೀಲ ಜಿ.ಆರ್. ಮೋಹನ್, ಮೇ 18ರಂದು ವಿಜಯೇಂದ್ರ ಕುಟುಂಬ ಸಮೇತರಾಗಿ ನಂಜನಗೂಡು ನಂಜುಂಡೇಶ್ವರ ದೇವಸ್ಥಾನಕ್ಕೆ ತೆರಳಿ, ವಿಶೇಷ ಪೂಜೆ ನಡೆಸಿದ ವಿಚಾರ ಕೋರ್ಟ್ ಗಮನಕ್ಕೆ ಬಂದಿತು.
ಮೆಮೋ ಪರಿಶೀಲಿಸಿದ ನ್ಯಾಯಪೀಠ, ಒಬ್ಬ ವ್ಯಕ್ತಿಯ ಅನುಕೂಲಕ್ಕಾಗಿ ದೇವಾಲಯ ತೆರೆದು ಪೂಜೆ ನೆರವೇರಿಸಲಾಗಿದ್ದು, ಸರ್ಕಾರದ ಮಾರ್ಗಸೂಚಿ ಉಲ್ಲಂಘನೆ ಮಾಡಿದಂತಾಗಿದೆ. ಆದ್ದರಿಂದ ಈ ವಿಚಾರದಲ್ಲಿ ಕೈಗೊಂಡ ಕ್ರಮಗಳ ಕುರಿತು ಜೂ. 3ರೊಳಗೆ ವರದಿ ಸಲ್ಲಿಸಬೇಕು ಎಂದು ಸರ್ಕಾರಕ್ಕೆ ಸೂಚನೆ ನೀಡಲಾಗಿದೆ.
ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಕೇವಲ ಅರ್ಚಕರು ಮಾತ್ರ ದೇವಾಲಕ್ಕೆ ತೆರಳಿ ಪೂಜೆ ಸಲ್ಲಿಸಲು ಅವಕಾಶವಿದೆ. ಆದರೆ, ಸಿಎಂ ಅವರ ಪುತ್ರ ವಿಜಯೇಂದ್ರ ದಂಪತಿ ಹೇಗೆ ದೇವಾಸ್ಥಾನದಲ್ಲಿ ಪೂಜೆ ಸಲ್ಲಿ ಸಿದರು? ಎಂದು ನ್ಯಾಯವಾದಿ ಪ್ರಶ್ನಿಸಿದ್ದಾರೆ.