ವಿಜಯಸಾಕ್ಷಿ ಸುದ್ದಿ, ಮುಳಗುಂದ
ಇಲ್ಲಿನ ಗದಗ-ಲಕ್ಷ್ಮೇಶ್ವರ ರಸ್ತೆಯ ಹುಣಸಿಮರದ ಕೆರೆ ಹತ್ತಿರವಿರುವ ಬಸವಣ್ಣನ ಗುಡಿ ಮುಂದೆ ನಿಧಿ ಆಸೆಗಾಗಿ ವಾಮಾಚಾರ ನಡೆಸಿ ನೆಲ ಅಗೆದಿರುವ ಘಟನೆ ಬೆಳಕಿಗೆ ಬಂದಿದೆ.
ಕೆರೆ ದಂಡೆಯಲ್ಲಿರುವ ಗುಡಿಯಲ್ಲಿ ಲಿಂಬೆ ಹಣ್ಣು, ಕುಂಕುಮ ಲೇಪಿತ ಅಕ್ಷತೆ, ತಾಮ್ರದ ತಗಡಿನ ತುಂಡು ಇಟ್ಟು ವಾಮಾಚಾರ ಮಾಡಿದ್ದಾರೆ. ಬಳಿಕ ಗುಡಿ ಮುಂದಿನ ಭರಮ ದೇವರ ಕಟ್ಟಿ ಕಲ್ಲು ಕಿತ್ತು ಜೆಸಿಬಿ ಬಳಸಿ ಸುಮಾರು ಹತ್ತು ಅಡಿ ಆಳದವರೆಗೆ ತಗ್ಗು ತೆಗೆದಿದ್ದಾರೆ. ಹೊಲಕ್ಕೆ ಬಂದ ಅಶೋಕ ಹುಣಸಿಮರದ ಇದನ್ನು ನೋಡಿ ಆಶ್ಚರ್ಯ ಚಕಿತರಾಗಿ ಗ್ರಾಮಸ್ಥರನ್ನು ಕರೆದು ಪರಿಶೀಲಿಸಿದಾಗ ಇದು ನಿಧಿ ಕಳ್ಳರ ಕೃತ್ಯ ಎಂದು ತಿಳಿದು ಬಂದಿದೆ.
ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ, ರಸ್ತೆ ಪಕ್ಕ ಕೆರೆ ಇರುವುದರಿಂದ ವಾಹನ ಸವಾರು ಗುಡಿ ಹತ್ತಿರ ಕುಳಿತು ನೀರು ಕುಡಿದು ವಿಶ್ರಾಂತಿ ಪಡೆದು ಮುಂದೆ ಸಾಗುತ್ತಾರೆ. ರೈತರು ಸಹ ಕುಡಿಯಲು ಇದೇ ನೀರು ಬಳಸುತ್ತಾರೆ. ಈ ಜಾಗದಲ್ಲಿ ನಿಧಿಗಾಗಿ ದುರುಳರು ನೆಲ ಅಗೆದಿರುವುದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.
ಸ್ಥಳಕ್ಕೆ ಮುಳಗುಂದ ಪೋಲಿಸ್ ಠಾಣೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.