ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಬಡ ಮಕ್ಕಳಿಗಾಗಿ ಉಚಿತ ಸೈನಿತ ತರಬೇತಿ ಕೇಂದ್ರ ಆರಂಭಿಸಲು ಮುಂದಾದ ನಿವೃತ್ತ ಯೋಧನಿಗೆ ಕೆಲ ಪುಢಾರಿಗಳು ತರಬೇತಿ ಕೇಂದ್ರ ಆರಂಭಿಸಲು ಅಡ್ಡಿಪಡಿಸಿದ್ದಲ್ಲದೆ, ಮಾನಸಿಕ ಕಿರಿಕಿರಿ ನೀಡಿದ್ದರಿಂದ ಬೇಸತ್ತ ಯೋಧ ಕುಟುಂಬ ಸಹಿತ ದಯಾ ಮರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕು ಬಾಲೇಹೊಸೂರು ಗ್ರಾಮದ ನಿವೃತ್ತ ಯೋಧ ಈರಣ್ಣ ಅಣ್ಣಿಗೇರಿ ಮತ್ತು ಆತನ ಕುಟುಂಬ ಇಂಥದ್ದೊಂದು ನಿರ್ಧಾರಕ್ಕೆ ಬಂದಿರುವುದು ಪರಿಸ್ಥಿತಿಯ ಭೀಕರತೆಯನ್ನು ತೋರಿಸುತ್ತದೆ.
17 ವರ್ಷ ದೇಶದ ಗಡಿಯಲ್ಲಿ ಶತ್ರು ರಾಷ್ಟ್ರದ ವಿರುದ್ಧ ಹೋರಾಡಿದ ಯೋಧ ತನ್ನವರ ಜೊತೆಗಿನ ಯುದ್ಧದಲ್ಲಿ ಸೋತು ದಯಾ ಮರಣ ಕೋರಿರುವುದು ವಿಪರ್ಯಾಸ.
ವರ್ಷದ ಹಿಂದಷ್ಟೆ ನಿವೃತ್ತಿಯಾದ ಯೋಧ ಏನಾದರೂ ಸಮಾಜಮುಖಿ ಕೆಲಸ ಮಾಡಬೇಕೆಂಬ ಹಂಬಲದೊಂದಿಗೆ ಸೇನೆಗೆ ಸೇರಬೇಕೆಂಬ ಹಂಬಲವಿರುವ ಬಡಮಕ್ಕಳಿಗೆ ಉಚಿತ ಸೈನಿಕ ತರಬೇತಿ ಕೇಂದ್ರ ಕಟ್ಟಡ ಕಟ್ಟಲು ಮುಂದಾಗಿದ್ದಾರೆ. ಈ ವೇಳೆ ಸ್ಥಳಿಯ ಅಧಿಕಾರಿಗಳು ಹಾಗೂ ಪುಡಿರೌಡಿಗಳು ತರಬೇತಿ ಕೇಂದ್ರ ಆರಂಭಿಸಲು ಅಡ್ಡಿಪಡಿಸಿದ್ದಲ್ಲದೆ, ಕಿರುಕುಳವನ್ನೂ ನೀಡಿದ್ದಾರೆ. ಈ ಬಗ್ಗೆ ಯೋಧ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನ ಆಗದೆ ಇದ್ದಾಗ, ಅಂತಿಮವಾಗಿ ದಯಾ ಮರಣ ಕೋರಿ ಅರ್ಜಿ ಸಲ್ಲಿಸುವ ನಿರ್ಧಾರಕ್ಕೆ ಬಂದಿದ್ದಾರೆ.
ಆಗಿದ್ದೇನು
ಬಾಲೆಹೊಸೂರ ಗ್ರಾಮದ ಈ ಮಾಜಿ ಸೈನಿಕ ಈರಣ್ಣ ಅಣ್ಣಿಗೇರಿ ತನ್ನ ಕುಟುಂಬದೊಂದಿಗೆ ಅಣ್ಣಿಗೇರಿಯಲ್ಲಿ ವಾಸವಾಗಿದ್ದಾರೆ. ಎಂಟು ವರ್ಷದ ಹಿಂದೆ ಲಕ್ಷ್ಮೇಶ್ವರ ಪಟ್ಟಣದ ಈಶ್ವರ ನಗರದಲ್ಲಿ ಜಾಗ ಖರೀದಿಸಿದ್ದಾರೆ. ಈ ಜಾಗೆಯಲ್ಲಿ ಮನೆ ಹಾಗೂ ಸೈನ್ಯಕ್ಕೆ ಸೇರಬೆಕೇಂದ ಬಡ ಮಕ್ಕಳಿಗೆ ಉಚಿತ ಸೈನಿಕ ತರಬೇತಿ ಕೇಂದ್ರ ಆರಂಭಿಸಲು ಮುಂದಾಗಿದ್ದಾರೆ. ಆದರೆ ಸ್ಥಳೀಯರಾದ ಗಂದಾಧರ ಗುಡಗೇರಿ ಹಾಗೂ ಮಂಜುನಾಥ ಮಾಗಡಿ ಎಂಬುವರು ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ ಎನ್ನುವುದು ಯೋಧನ ಆರೋಪ.
ಯಾವುದೇ ಹುರುಳಿಲ್ಲದೇ ಕಟ್ಟಡ ಕಟ್ಟಲು ಅನುಮತಿ ನೀಡದೇ, ಸೈನಿಕನ ಹತ್ಯೆ ಮಾಡಲು ಸಂಚು ರೂಪಿಸಿದ್ದಾರೆ. ಇದರಿಂದ ಹಂತಕರ ಕೈನಲ್ಲಿ ಸಾವನ್ನಪ್ಪುವುದಕ್ಕಿಂತ ಸರ್ಕಾರದ ಎದುರು ಸಾವಿಗೆ ಶರಣಾಗುವುದೆ ಒಳ್ಳೆಯದು ಎಂದು ನೊಂದು ದಯಾಮರಣಕ್ಕೆ ಮುಂದಾಗಿದ್ದೇವೆ ಎನ್ನುತ್ತಾರೆ ಮಾಜಿ ಸೈನಿಕ.
ಎಂಟು ಜನರಿಂದ ಅರ್ಜಿ
ಮಾಜಿ ಸೈನಿಕ ಈರಣ್ಣ ಮತ್ತು ಅವರ ಪತ್ನಿ, ಮೂರು ವರ್ಷದ ಹೆಣ್ಣು ಮಗು, ಐದು ತಿಂಗಳು ಹಸುಗೂಸು, ಯೋಧ ಈರಣ್ಣನ ಸಹೋದರ ಶಿವಾನಂದ ಮತ್ತು ಅವರ ಪತ್ನಿ, ಇಬ್ಬರು ಮಕ್ಕಳು ಸೇರಿದಂತೆ ಒಟ್ಟು 8 ಜನ ರಾಷ್ಟ್ರಪತಿ, ಪ್ರಧಾನಮಂತ್ರಿ, ಸುಪ್ರಿಂಕೋರ್ಟ ನ್ಯಾಯಾಧೀಶರು ಹಾಗೂ ಮಾನವ ಹಕ್ಕುಗಳ ಆಯೋಗಕ್ಕೆ ದಯಾ ಮರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಸರಕಾರ, ರಾಷ್ಟ್ರಪತಿಗಳು ನನಗೆ ನ್ಯಾಯ ಕೊಡಿಸಬೇಕು. ಇಲ್ಲವೇ ದಯಾ ಮರಣ ಕೊಡಬೇಕು. ಇನ್ನು ಮುಂದಾದರೂ ನನ್ನ ಸಮಸ್ಯೆ ಪರಿಹಾರ ಆಗದಿದ್ದರೂ ಕುಟುಂಬ ಸಹಿತ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಯೋಧ ಈರಣ್ಣ ಅಣ್ಣಿಗೇರಿ ಸರಕಾರಕ್ಕೆ ಎಚ್ಚರಿಸಿದ್ದಾರೆ.
ಉಚಿತ ಸೈನಿಕ ತರಬೇತಿ ಕೇಂದ್ರ ಆರಂಭಕ್ಕೆ ಅಡ್ಡಿಯಾಗಿರುವ ಪುಂಡರ ಕಿರುಕುಳದಿಂದ ಬೇಸತ್ತು ದಯಾ ಮಾರಣಕ್ಕೆ ಅರ್ಜಿ ಸಲ್ಲಿಸಿದ್ದೇನೆ. ರಾಷ್ಟ್ರಪತಿಗಳು ನನ್ನ ಮನವಿಯನ್ನು ಪರಿಗಣಿಸಬೇಕು. ಸಂಬಂಧಿಸಿದ ಅಧಿಕಾರಿಗಳು ಕಿರುಕುಳ ನೀಡುತ್ತಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು.
– ಈರಣ್ಣ ಅಣ್ಣಿಗೇರಿ, ಮಾಜಿ ಸೈನಿಕ