30.8 C
Gadag
Tuesday, May 30, 2023

ಕೇಂದ್ರ-ರಾಜ್ಯದಲ್ಲಿ ಬರ್ತಿದ್ದಾರೆ ಹೊಸ ಮಂತ್ರಿಗಳು: ಕಲ್ಯಾಣ ಕರ್ನಾಟಕ ಭಾಗಕ್ಕೆ ಈ ಸಲವಾದರೂ ಸಿಗುತ್ತಾ ಪ್ರಾತಿನಿಧ್ಯ?

Spread the love

ಬಿಯಸ್ಕೆ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಸ್ತಿತ್ವದಲ್ಲಿದ್ದು, ಕೇಂದ್ರದಲ್ಲಿ ಖಾಲಿ ಇರುವ ಸಚಿವ ಸ್ಥಾನಕ್ಕೆ ಬಹಳ ವರ್ಷಗಳ ನಂತರ ಕಲ್ಯಾಣ ಕರ್ನಾಟಕ ಭಾಗದ ಅದರಲ್ಲೂ ಕೊಪ್ಪಳ ಜಿಲ್ಲೆಯ ಸಂಸದ ಕರಡಿ ಸಂಗಣ್ಣ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ. ಹಾಗೆಯೇ ಸದ್ಯದಲ್ಲೇ ಪುನರ್ರಚನೆಯಾಗಲಿರುವ ರಾಜ್ಯ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಲು ಜಿಲ್ಲೆಯ ಶಾಸಕರಾದ ಹಾಲಪ್ಪ ಆಚಾರ್ ಮತ್ತು ಪರಣ್ಣ ಮುನವಳ್ಳಿ ಪೈಪೋಟಿ ನಡೆಸಿದ್ದಾರೆ ಎನ್ನಲಾಗಿದೆ.

ಕೇಂದ್ರದಲ್ಲಿ ಈ ಹಿಂದೆ ಯುಪಿಎ ಸರಕಾರ ಇದ್ದಾಗಲೂ ಈ ಭಾಗದ ಸಂಸದರು ಮಂತ್ರಿಯಾಗಿದ್ದು ತೀರಾ ವಿರಳ. ಅದರಲ್ಲೂ ಕೊಪ್ಪಳ ಜಿಲ್ಲೆಗೆ ಸಿಕ್ಕಿರುವ ಪ್ರಾತಿನಿಧ್ಯ ಶೇಕಡಾ 1ಕ್ಕಿಂತಲೂ ಎಂದು ಹೇಳಬಹುದು. ಬಿಜೆಪಿ ನೇತೃತ್ವದ ಮೋದಿ ಸರಕಾರ ಅಧಿಕಾರದಲ್ಲಿದ್ದು ದಶಕವಾಗುತ್ತಾ ಬಂದರೂ ಕಲ್ಯಾಣ ಕರ್ನಾಟಕಕ್ಕೆ ಮಂತ್ರಿಭಾಗ್ಯ ಒದಗಿ ಬಂದಿಲ್ಲ. ಈಚೆಗೆ ಸಂಸದ ಸುರೇಶ ಅಂಗಡಿ ನಿಧನದಿಂದ ತೆರವಾಗಿರುವ ಸಚಿವ ಸ್ಥಾನವನ್ನು ಈ ಬಾರಿ ಕರ್ನಾಟಕದ ಸಂಸದರಿಗೆ ನೀಡಲು ಕೇಂದ್ರ ಯೋಚಿಸಿದೆ ಎನ್ನಲಾಗಿದೆ.

ಸಚಿವ ಸ್ಥಾನವನ್ನುಂ ಯುವ ಸಂಸದರಿಗೆ ನೀಡಬೇಕೆನ್ನುವ ಉತ್ಸಾಹ ಕೇಂದ್ರ ಸರಕಾರಕ್ಕಿದ್ದು, ಹಿರಿಯ ಸಂಸದರನ್ನು ಕಡೆಗಣಿಸುವಂತಿಲ್ಲ. ಹಾಗಾಗಿ ಈ ಸಂದಿಗ್ಧ ಸ್ಥಿತಿಯಲ್ಲಿರುವ ಕೇಂದ್ರ ಎರಡು ಬಾರಿ ಸಂಸದರಾಗಿರುವ ಸುಮಾರು 40 ವರ್ಷಗಳ ರಾಜಕಾರಣದಲ್ಲಿ ಸಜ್ಜನ ರಾಜಕಾರಣಿ ಎನಿಸಿರುವ ಕೊಪ್ಪಳ ಸಂಸದ ಕರಡಿ ಸಂಗಣ್ಣ ಬಗ್ಗೆ ಒಲವು ತೋರಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಹೈಕಮಾಂಡ್ ಇದೇ ರೀತಿ ಯೋಚಿಸಿದ್ದರೆ ಕರಡಿ ಸಂಗಣ್ಣನವರು ಸಚಿವರಾಗುವ ಹಾದಿ ಸುಗಮ. ಒಂದೊಮ್ಮೆ ಮುಂಬರುವ ಚುನಾವಣೆಯ ಲೆಕ್ಕಾಚಾರ ನಡೆಸಿ ಬೇರೆ ಏನಾದರೂ ಯೋಚನೆಗಳಿದ್ದರೆ ಮಾತ್ರ ಸಂಗಣ್ಣ ಮತ್ತೇ ಬರೀ ಸಂಸದರಾಗಿ ಮಾತ್ರ ಮುಂದುವರಿಯುತ್ತಾರೆ.

ರಾಜ್ಯದಲ್ಲೂ ಸಚಿವ ಸಂಪುಟ ಪುನರ್ರಚನೆಯ ಕಸರತ್ತು ಜೋರಾಗಿ ನಡೆದಿದೆ. ಕಳೆದ ಸಲ ನಡೆದ ಪುನರ್ರಚನೆಯ ಕಾಲಕ್ಕೆ ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ಇನ್ನೇನು ಪ್ರಮಾಣವಚನ ಸ್ವೀಕರಿಸೇ ಬಿಟ್ಟರು ಎನ್ನುವಂಥ ವಾತಾವರಣ ನಿರ್ಮಾಣವಾಗಿತ್ತು. ಆದರೆ ಕೊನೆಘಳಿಗೆಯಲ್ಲಿ ಬಿಎಸ್‍ವೈ ಮುನಿಸಿನಿಂದ ಆಚಾರ್‍ಗೆ ಸಚಿವ ಸ್ಥಾನ ಕೈ ತಪ್ಪಿತ್ತು. ಈಗಲೂ ಸಹ ಹಾಲಪ್ಪ ಆಚಾರ್ ಬಲವಾಗಿ ಕೇಳಿ ಬರುತ್ತಿದೆ.

ನಿಗಮ ಮಂಡಳಿ ಅಧ್ಯಕ್ಷರ ಆಯ್ಕೆ ವೇಳೆ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿಯವರನ್ನು ನಿಗಮವೊಂದರ ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಮಂತ್ರಿಗಿರಿ ಅಪಸ್ವರ ಬಾರದಂತೆ ನೋಡಿಕೊಂಡಿದ್ದ ರಾಜ್ಯ ಸರಕಾರ ಕೊನೆಗೆ ಅಧ್ಯಕ್ಷ ಸ್ಥಾನವನ್ನು ಅವರಿಗೆ ನೀಡಲಿಲ್ಲ. ಬಿಎಸ್‍ವೈ ಜೊತೆ ಗುರುತಿಸಿಕೊಂಡಿರುವ ಹಾಗೂ ಆಪ್ತರಾಗಿರುವ ಪರಣ್ಣ ಮುನವಳ್ಳಿ ಈ ಸಲದ ಸಚಿವ ಸಂಪುಟ ಪುನರ್ರಚನೆಯಲ್ಲಿ ಮಂತ್ರಿ ಭಾಗ್ಯ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ರಾಜಕಾರಣ ಅಷ್ಟು ಸುಲಭವಾಗಿ ಅಂದಾಜಿಸಲು ಬರುವುದಿಲ್ಲ. ಏನು ಬೇಕಾದರೂ ಆಗಬಹುದು. ಆದರೂ ಮಂತ್ರಿಸ್ಥಾನಕ್ಕೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲೆಗೆ ಪ್ರಾತಿನಿಧ್ಯ ಸಿಕ್ಕರೆ ಉತ್ತಮ ಎನ್ನುವುದು ಈ ಭಾಗದ ಜನರ ಅಭಿಪ್ರಾಯ.

ಹಾಲಪ್ಪ ಆಚಾರ್


ಬಿಜೆಪಿಯಿಂದ ಆಯ್ಕೆಯಾಗಿರುವ ಎಲ್ಲ ಶಾಸಕರು ಸಹ ಸಚಿವ ಸ್ಥಾನದ ಆಕಾಂಕ್ಷಿಗಳೇ. ಆದರೆ ನಾನು ಮಂತ್ರಿಗಿರಿ ಕೊಡಿ ಎಂದು ಯಾರಿಗೂ ದುಂಬಾಲು ಬೀಳುವುದಿಲ್ಲ. ಸಚಿವ ಸ್ಥಾನ ಕೊಟ್ಟರೆ ಸಮರ್ಥವಾಗಿ ನಿಭಾಯಿಸುವ ವಿಶ್ವಾಸ ನನಗಿದೆ. ಈ ವಿಷಯದಲ್ಲಿ ಹೈ ಕಮಾಂಡ್ ನಿರ್ಧಾರಕ್ಕೆ ಬದ್ಧ.
-ಹಾಲಪ್ಪ ಆಚಾರ್, ಶಾಸಕರು, ಯಲಬುರ್ಗಾ.

ಪರಣ್ಣ ಮುನವಳ್ಳಿ


ಎರಡು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಕಳೆದ 20 ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ಶ್ರಮಿಸಿದ್ದೇನೆ. ಜೊತೆಗೆ ಹಿರಿತನ ಇದೆ. ಸಚಿವ ಸಂಪುಟ ಪುನರ್ರಚನೆ ಕಾಲಕ್ಕೆ ಮಂತ್ರಿ ಸ್ಥಾನಕ್ಕೆ ತಮ್ಮನ್ನು ಪರಿಗಣಿಸುವಂತೆ ಸರಕಾರಕ್ಕೆ ಕೋರುತ್ತೇನೆ. ಅಚಿತಿಮವಾಗಿ ಹೈಕಮಾಂಡ್ ಏನೇ ನಿರ್ಣಯ ತೆಗೆದುಕೊಂಡರೂ ಬದ್ಧರಾಗಿರುತ್ತೇವೆ.
-ಪರಣ್ಣ ಮುನವಳ್ಳಿ, ಶಾಸಕರು, ಗಂಗಾವತಿ.

ಸಂಗಣ್ಣ ಕರಡಿ


ನಾನು ಮಂತ್ರಿಯಾಗಲೇಬೇಕು ಎಂದು ಅಪೇಕ್ಷಿಸಿಲ್ಲ. ನಮ್ಮ ಸರಕಾರ ಜವಾಬ್ದಾರಿ ಕೊಟ್ಟರೆ ನಿಭಾಯಿಸುತ್ತೇನೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ಮಂತ್ರಿ ಸ್ಥಾನ ಸಿಗದಿರುವುದು ಒಪ್ಪುವ ವಿಷಯವೇ. ಆದರೆ ಹೈಕಮಾಂಡ್ ತೀರ್ಮಾನವೇ ಅಂತಿಮ ಆಗಿರುವುದರಿಂದ ಪಕ್ಷದ ನಿರ್ದೇಶನದಂತೆ ನಡೆದುಕೊಳ್ಳುತ್ತೇವೆ. ಸಂಗಣ್ಣ ಕರಡಿ, ಸಂಸದ, ಕೊಪ್ಪಳ.


Spread the love

Related Posts

LEAVE A REPLY

Please enter your comment!
Please enter your name here

Stay Connected

0FansLike
3,790FollowersFollow
0SubscribersSubscribe
- Advertisement -spot_img

Latest Posts