ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಈದ್ ಮಿಲಾದ್ ಹಬ್ಬವನ್ನು ಶಾಂತಿ, ಸೌಹಾರ್ದತೆ ಹಾಗೂ ಸಹಬಾಳ್ವೆಯ ವಾತಾವರಣದಲ್ಲಿ ಆಚರಿಸಬೇಕು. ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ, ಎಲ್ಲ ಸಮುದಾಯಗಳ ಜನರು ಪರಸ್ಪರ ಗೌರವ ಹಾಗೂ ಸಹಕಾರದೊಂದಿಗೆ ಹಬ್ಬವನ್ನು ಸಂಭ್ರಮದಿಂದ ಆಚರಿಸಬೇಕು ಎಂದು ಸಿಪಿಐ ವಿಕಾಸ್ ಲಮಾಣಿ ಹೇಳಿದರು.
ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಈದ್ ಮಿಲಾದ್ ಹಿನ್ನೆಲೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಹಬ್ಬದ ಸಂದರ್ಭದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದರು.
ಡಿವೈಎಸ್ಪಿ ಮಲ್ಲೇಶ್ ನಾಯ್ಕ್ ದೊಡ್ಮನಿ ಮಾತನಾಡಿ, ಪಟ್ಟಣದಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವುದು ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರ ಜವಾಬ್ದಾರಿಯೂ ಆಗಿದೆ. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದಲ್ಲಿ ಕೂಡಲೇ ಪೊಲೀಸರ ಗಮನಕ್ಕೆ ತರಬೇಕು ಎಂದು ಮನವಿ ಮಾಡಿದರು.
ಈದ್ ಮಿಲಾದ್ ಕುರಿತು ಮಾತನಾಡಿದ ಸಂಪಾದಕ ಎಂ. ಶಿವಮೂರ್ತಿ, ಪ್ರವಾದಿ ಮೊಹಮ್ಮದ್ ಅವರ ಜೀವನ ಹಾಗೂ ಸಂದೇಶಗಳು ಸಮಾಜಕ್ಕೆ ಶಾಂತಿ, ಸಹೋದರತೆ ಮತ್ತು ಮಾನವೀಯ ಮೌಲ್ಯಗಳನ್ನು ಸಾರುತ್ತವೆ. ಎಲ್ಲರೂ ಪರಸ್ಪರ ಪ್ರೀತಿ, ಗೌರವ ಹಾಗೂ ಸೌಹಾರ್ದತೆಯಿಂದ ಬದುಕುವ ಮೂಲಕ ಸಮಾಜದಲ್ಲಿ ಶಾಂತಿ ನೆಲೆಸಲು ಸಹಕರಿಸಬೇಕು ಎಂದರು.
ಸಭೆಯಲ್ಲಿ ಪಿಎಸ್ಐ ನಾಗರತ್ನಮ್ಮ, ಕ್ರೈಂ ಪಿಎಸ್ಐ ಉಮಾಪತಿ ನಾಯ್ಕ, ಪುರಸಭೆ ಸದಸ್ಯರಾದ ತೆಲಿಗಿ ನೆಲ್ಲು ಇಸ್ಮಾಯಿಲ್ ಸಾಹೇಬ್, ಜೋಗಿ ಹನುಮಂತಪ್ಪ, ಕೆಜಿಎನ್ ಅಲ್ಲಾಭಕ್ಷಿ, ರಾಜೇಶ್ ಬ್ಯಾಡಗಿ, ದೀಪಕ್ ಕಠಾರಿ, ಸಿಖಂದರ್, ಗ್ಯಾರಂಟಿ ತಾಲೂಕು ಅಧ್ಯಕ್ಷ ಸೊನ್ನದ ಗುರು ಬಸವರಾಜ್, ತತ್ತಿ ಕಾಸಿಂ ಸಾಹೇಬ್, ಯಮನೂರು ಸಾಬ್, ದಾದಾಪೀರ್, ಎಣ್ಣೆ ಬಾಷಾ, ಬುಡೆನ್ ಸಾಬ್ ಅರಳಿಹಳ್ಳಿ, ಕರೀಂ ಸಾಬ್ ಬಲಹುಣಿಸಿ, ಬಾಬು ಪೇಂಟರ್, ಬ್ರೆಡ್ ನಜೀರ್ ಸಾಬ್, ವರದಿಗಾರ ಸರ್ದಾರ್ ಯಮನೂರಪ್ಪ ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು ಹಾಗೂ ಯುವಕರು ಉಪಸ್ಥಿತರಿದ್ದರು.
ವಿವಿಧ ಸಮುದಾಯಗಳ ಮುಖಂಡರು ಹಾಗೂ ಸಾರ್ವಜನಿಕರು ಈದ್ ಮಿಲಾದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸುವ ಕುರಿತು ಚರ್ಚಿಸಿದರು. ಸಭೆ ಸೌಹಾರ್ದತೆ, ಸಹಬಾಳ್ವೆ ಹಾಗೂ ಶಾಂತಿಯ ಸಂದೇಶ ಸಾರುವ ಮೂಲಕ ಗಮನ ಸೆಳೆಯಿತು.



