ಸಿನಿಮಾ ವಿಮರ್ಶೆ

ಸಿನಿಮಾ: RRR
ಪಾತ್ರವರ್ಗ: ಜ್ಯೂ.ಎನ್ಟಿಆರ್, ರಾಮ್ ಚರಣ್, ಆಲಿಯಾ ಭಟ್, ಅಜಯ್ ದೇವಗನ್ ಮುಂತಾದವರು
ನಿರ್ದೇಶನ: ಎಸ್.ಎಸ್. ರಾಜಮೌಳಿ
ಛಾಯಾಗ್ರಹಣ: ಕೆ.ಕೆ.ಸೆಂಥಿಲ್‌ಕುಮಾರ್
ಸಂಗೀತ: ಎಂ.ಎಂ.ಕೀರವಾಣಿ
ನಿರ್ಮಾಣ: ಡಿವಿವಿ ದಾನಯ್ಯ ಪ್ರದರ್ಶನ: ಶ್ರೀ ಶಿವ ಚಿತ್ರಮಂದಿರ, ಕೊಪ್ಪಳ ರೇಟಿಂಗ್: 3.5/5
-ಬಸವರಾಜ ಕರುಗಲ್. ರಾಜಮೌಳಿ ನಿರ್ದೇಶನದ ಸಿನಿಮಾ ಅಂದ್ರೆ ನಿರೀಕ್ಷೆಯ ರೇಂಜೇ ಬೇರೆ. ಅದರಲ್ಲೂ ಅವರ ನಿರ್ದೇಶನದ ಮಲ್ಟಿ ಸ್ಟಾರ್ ಸಿನಿಮಾ ಅಂದ್ರೆ ಕೇಳ್ತಿರಾ? ಇಂಥ ದೊಡ್ಡ ನಿರೀಕ್ಷೆ ಇಟ್ಟುಕೊಂಡು ಥೇಟರ್‌ಗೆ ಹೋದರೆ ಕೊಂಚ ನಿರಾಸೆಯಾಗೊದಂತು ಖಚಿತ.
ಅವರ ಹಿಂದಿನ ಸಿನಿಮಾಗಳು, ಮೇಕಿಂಗ್ ಬಗ್ಗೆ ಎಲ್ಲರಿಗೂ ಗೊತ್ತಿರೋದೇ. ಆರ್‌ಆರ್‌ಆರ್ ಬಗ್ಗೆ ಸಹ ಅಂಥದ್ದೇ ಕಲ್ಪನೆ ಮೂಡೋದು ಸಹಜ. ರಾಜಮೌಳಿ ಬೋರ್ ಆಗದಂತೆ ಕಥೆ ಹೆಣೆದಿದ್ದಾರೆ. ದೃಶ್ಯ ವೈಭವ, ಮೇಕಿಂಗ್ ನ ಸೆಳೆಯೋದು ಕ್ಲೈಮ್ಯಾಕ್ಸ್‌ನಲ್ಲಿ ಮಾತ್ರ.
ಇದೊಂದು ಸ್ವಾತಂತ್ರ್ಯಪೂರ್ವ ಹಿನ್ನೆಲೆಯ ಗೆಳೆತನ ಮತ್ತು ಹಗೆತನದ ಕಥೆ. ನೀರು, ಬೆಂಕಿ ಮತ್ತು ರೌದ್ರದ ಸಾಮ್ಯತೆಯನ್ನು ಸೂಕ್ಷ್ಮವಾಗಿ ತೆರೆದುಕೊಳ್ಳುತ್ತಲೇ ಕಥೆ ಶುರುವಾಗುತ್ತದೆ.
ಕಾಡಿನ ಎಳೆಯ ಹಾಡಿನ ಹಕ್ಕಿಯನ್ನು ಬ್ರಿಟಿಷರು ಎಳೆದೊಯ್ಯುವ ಮೂಲಕ ಲಾಲಾಲಜಪತ್ ರಾಯ್ ಉಲ್ಲೇಖದ ಮುಖಾಂತರ ಇದೊಂದು ಸ್ವಾತಂತ್ರ್ಯ ಸಂಗ್ರಾಮ ಸಮಯದ ಕಥೆ ಎಂದು ಸುಳಿವು ಸಿಗುತ್ತದೆ. ಬ್ರಿಟಿಷರಲ್ಲಿ ಬಂಧಿಯಾದ ಚಿಕ್ಕ ಹುಡುಗಿಯನ್ನು ಬಿಡಿಸಿಕೊಂಡು ಬರಲು ಕಾಡಿನಲ್ಲೇ ಬೆಳೆದ ಕೊಮರಮ್ ಭೀಮ್ (ಜ್ಯೂ. ಎನ್ಟಿಆರ್) ದೆಹಲಿ ಕಡೆಗೆ ಮುಸ್ಲಿಂ ವೇಷದಲ್ಲಿ ಪಯಣ ಬೆಳೆಸುತ್ತಾನೆ. ಈತನನ್ನೇ ಹಿಡಿಯಲು ಮಾರುವೇಷದಲ್ಲಿ ಬಂದ ಬ್ರಿಡಿಷ್ ಅಧಿಕಾರಿ ಅಲ್ಲುರಿ ಸೀತಾರಾಮ್ (ರಾಮಚರಣ್) ಆತನೊಂದಿಗೇನೇ ಗಾಢವಾದ ಗೆಳೆತನ. ಇಂಟರ್‌ವೆಲ್ ವೇಳೆಗೆ ಇಬ್ಬರ ಅಸಲಿ ವೇಷ ತೆರೆದುಕೊಳ್ಳುತ್ತಲೇ ದುಷ್ಮನ್. ಕ್ಲೈಮ್ಯಾಕ್ಸ್‌ನಲ್ಲಿ ಮತ್ತೇ ದೋಸ್ತಿಯಾಗಿ ಜಂಟೀ ಕಾರ್ಯಾಚರಣೆ ಮೂಲಕ ಬ್ರಿಟಿಷರ ಪಡೆಯನ್ನು ಉಡೀಸ್ ಮಾಡಿ ಸಂಪೂರತಣ ಧ್ವಂಸಗೊಳಿಸುತ್ತಾರೆ.
ಈ ಮಧ್ಯೆ ಬ್ರಿಟಿಷ್ ಅಧಿಕಾರಿಯಾಗಿದ್ದವ ಏಕೆ ಅವರ ವಿರುದ್ದ ತಿರುಗಿ ಬಿದ್ದ, ಇಂಗ್ಲಿಷರ ವಶದಲ್ಲಿ ಕಾಡಿನ ಹಾಡು ಹಕ್ಕಿ (ಚಿಕ್ಕ ಹುಡುಗಿ) ಏನಾದಳು ಎಂಬುದನ್ನ ತೆರೆಯ ಮೇಲೆ ನೋಡೀನೇ ತಿಳಿದುಕೊಳ್ಳಬೇಕು.
ಹಲವು ದೃಶ್ಯಗಳನ್ನು ಸಾಂಕೇತಿಕವಾಗಿ, ಸಾಮ್ಯತಾನುಸಾರ ಮಾಡಿದ್ದಾರೆ ರಾಜಮೌಳಿ. ಅವರ ಬುದ್ಧಿವಂತಿಕೆಗೆ ಭೇಷ್ ಎನ್ನಲೇಬೇಕು.
ಸಿನಿಮಾದ ಕಥೆ ಸ್ವಾತಂತ್ರ್ಯ ಪೂರ್ವದ ಹಿನ್ನೆಲೆ ಹೊಂದಿದ್ದರೂ ಗೆಖೆತನ, ಹಗೆತನದ ಸರಳವಾದ ಕಥೆ. ಇಂಥ ಅನೇಕ ಸಿನಿಮಾಗಳು ಎಲ್ಲ ಭಾಷೆಯಲ್ಲೂ ಬಂದಿವೆ. ಗೆದ್ದದ್ದು ವಿರಳ. ಸ್ವಾತಂತ್ರ್ಯದ ಕಥೆ ಎಂದಾಕ್ಷಣ ಕೆಲವರಿಗೆ ಡಾಕ್ಯುಮೆಂಟರಿ ಎನ್ನುವ ಭಯ. ಆದರೆ ಇದು ಕಾಲ್ಪನಿಕ ಕಥೆ. ಸಿಂಪಲ್ ಕಥೆಯಾದರೂ, ಅದ್ದೂರಿ ದೃಶ್ಯವೈಭವ, ಎಲ್ಲರನ್ನೂ ಮೆಚ್ವಿಸುವ ಗ್ರಾಫಿಕ್ಸ್‌ಗಳ ಸಡಗರ.
ಸಿನಿಮಾ ಮೂರು ಗಂಟೆ ಇರುವುದರಿಂದ ಸಿನಿಮಾ ಪ್ರೇಕ್ಷಕನಿಂದ ಕೊಂಚ ತಾಳ್ಮೆ ಕೇಳಬಹುದು. ಕೆಲವೊಮ್ಮೆ ಸ್ಕ್ರಿಪ್ಟ್ ಮೀರಿ ಮೇಕಿಂಗ್ ಹೈಲೈಟ್ ಆಗಿ ಬಿಡುತ್ತದೆ. ಇಡೀ ಚಿತ್ರದಲ್ಲಿ ಹೈಲೈಟ್ ಅಂದ್ರೆ ರಾಮ್‌ಚರಣ್, ಜ್ಯೂ.ಎನ್ಟಿಆರ್.
ರಾಮ್ ಚರಣ್ ಹಾಗೂ ಜ್ಯೂ. ಎನ್ಟಿಆರ್ ನಟನೆ ಇಡೀ ಚಿತ್ರವನ್ನು ಆವರಿಸಿಕೊಂಡಿದೆ. ಅಲ್ಲುರಿ ಸೀತಾರಾಮ್ ಪಾತ್ರದಲ್ಲಿ ರಾಮ್ ಚರಣ್ ಮಿಂಚಿದ್ದಾರೆ. ಆ್ಯಕ್ಷನ್ ದೃಶ್ಯಗಳಲ್ಲಿ ಅವರು ಅಂಕ ಗಿಟ್ಟಿಸಿಕೊಳ್ಳುತ್ತಾರೆ. ಒಂದೇ ಮಾತಲ್ಲಿ ಹೇಳೋದಾದರೆ ಬೆಂಕಿಯಂತೆ ಪ್ರಜ್ವಲಿಸಿದ್ದಾರೆ. ಜ್ಯೂ.ಎನ್ಟಿಆರ್ ಭೀಮ್ ಆಗಿ ಗಮನ ಸೆಳೆದಿದ್ದಾರೆ. ಕುಟುಂಬದ ವಿಚಾರಕ್ಕೆ ಬಂದರೆ ಎಲ್ಲವನ್ನೂ ನುಂಗಿ ಹಾಕುವ ಸುನಾಮಿಯಾಗಿ ಜ್ಯೂ.ಎನ್ಟಿಆರ್ ಗಮನ ಸೆಳೆಯುತ್ತಾರೆ. ರಾಮ್ ಚರಣ್ ಪಾತ್ರಕ್ಕೆ ಹೆಚ್ಚು ಆದ್ಯತೆ ಇದೆ.
ಆರಂಭದಲ್ಲಿ ಬರುವ ದೃಶ್ಯದಲ್ಲಿ ರಾಮ್ ಚರಣ್-ಜ್ಯೂ.ಎನ್ಟಿಆರ್ ಕಣ್ಣಿನಲ್ಲೇ ಮಾತನಾಡಿಕೊಳ್ಳುವುದು, ಹುಲಿಯನ್ನು ಎದುರು ಹಾಕಿಕೊಳ್ಳುವುದು ಸೇರಿ ಹಲವು ದೃಶ್ಯಗಳು ಗಮನ ಸೆಳೆಯುತ್ತದೆ. ಇಬ್ಬರೂ ಜತೆಯಾಗಿ ಸ್ಟೆಪ್ ಹಾಕಿರೋ ‘ಹಳ್ಳಿ ನಾಟು..’ ಸಾಂಗ್ ಸಿನಿಮಾದ ಎನರ್ಜಿ ಹೆಚ್ಚಿಸಿದೆ. ಆಲಿಯಾ ಭಟ್ ಹಾಗೂ ಅಜಯ್ ದೇವಗನ್ ಹೆಚ್ಚು ಹೊತ್ತು ತೆರೆಮೇಲೆ ಬರುವುದಿಲ್ಲ. ಆದಾಗ್ಯೂ, ಎರಡೂ ಪಾತ್ರಗಳು ಕಥೆಗೆ ದೊಡ್ಡ ತಿರುವು ನೀಡುತ್ತವೆ. ಬ್ರಿಟಿಷರಾಗಿ ಕಾಣಿಸಿಕೊಂಡ ವಿದೇಶಿ ಕಲಾವಿದರು ಗಮನ ಸೆಳೆಯುತ್ತಾರೆ.
ಕೆ.ಕೆ. ಸೆಂಥಿಲ್ ಕುಮಾರ್ ಛಾಯಾಗ್ರಹಣ ಚಿತ್ರದ ಮೆರುಗನ್ನು ಹೆಚ್ಚಿಸಿದೆ. ಇಂಟರ್ವಲ್ಗೂ ಮೊದಲು ಬರುವ ಫೈಟ್ ಸೇರಿ ಬಹುತೇಕ ದೃಶ್ಯಗಳನ್ನು ಅದ್ಭುತವಾಗಿ ಸೆರೆಹಿಡಿದಿದ್ದಾರೆ. ಎಂ.ಎಂ. ಕೀರವಾಣಿ ಹಿನ್ನೆಲೆ ಸಂಗೀತ ಹೆಚ್ಚು ಅಂಕ ಗಿಟ್ಟಿಸಿಕೊಳ್ಳುತ್ತದೆ. ಸಾಂಗ್ ವಿಚಾರದಲ್ಲಿ ಕೀರವಾಣಿ ಡಲ್ಲು. ಸಿನಿಮಾ ಅದ್ದೂರಿಯಾಗಿ ಮೂಡಿಬರೋಕೆ ನಿರ್ಮಾಪಕ ದಾನಯ್ಯ ರಾಜಮೌಳಿ ಮೇಲೆ ಭರವಸೆ ಇಟ್ಟು ಆರ್‌ಆರ್‌ಆರ್‌ಗೆ ಹಣ ಸುರಿದಿದ್ದಾರೆ. ಬಂಡವಾಳಕ್ಕಂತು ಮೋಸ ಇಲ್ಲ ಎನ್ನಬಹುದು.
ಒಟ್ಟಾರೆಯಾಗಿ ಬಾಹುಬಲಿ ಹ್ಯಾಂಗೋವರ್ ಬಿಟ್ಟು ಥೇಟರ್‌ಗೆ ಹೋಗುವುದಾದರೆ ಎಲ್ಲ ವರ್ಗದ ಜನರು ಆರ್‌ಆರ್‌ಆರ್ ಸಿನಿಮಾ ಎಂಜಾಯ್ ಮಾಡಬಹುದು.