ವಿಜಯಸಾಕ್ಷಿ ಸುದ್ದಿ, ಮೈಸೂರು
ಸಾ.ರಾ. ಮಹೇಶ್ ವರ್ಸಸ್ ರೋಹಿಣಿ ಸಿಂಧೂರಿ ಸಂಘರ್ಷಕ್ಕೆ ಹೊಸ ಟ್ವಿಸ್ಟ್ ದೊರಕಿದ್ದು, ಸಾ.ರಾ. ಮಂಡಿಸಿದ್ದ ಹಕ್ಕುಚ್ಯುತಿಗೆ ಸಮಿತಿ ಎದುರು ರೋಹಿಣಿ ಸಿಂಧೂರಿ ಕ್ಷಮಾಪಣೆ ಕೇಳಿದ್ದಾರೆ ಎನ್ನಲಾಗಿದೆ.
ಜನವರಿ 12ರಂದು ಸಾ.ರಾ. ಮಹೇಶ್ ಅಧ್ಯಕ್ಷತೆಯಲ್ಲಿ ಸಮಿತಿ ನಡೆಸಿದ್ದ ಮುಡಾ ಸಭೆ, ಶ್ರೀರಾಮ ಸಕ್ಕರೆ ಕಾರ್ಖಾನೆಯ ಸಭೆಗೆ ಗೈರಾಗಿ ರೋಹಿಣಿ ಸಿಂಧೂರಿ ಉದ್ಧಟತನ ಪ್ರದರ್ಶಿಸಿದ್ದರು.
ರೋಹಿಣಿ ವರ್ತನೆಗೆ ಸಿಡಿಮಿಡಿಗೊಂಡಿದ್ದ ಸಾ.ರಾ.ಮಹೇಶ್ ಸದನದಲ್ಲಿ ಹಕ್ಕುಚ್ಯುತಿ ಮಂಡಿಸಲು ಮುಂದಾಗಿದ್ದರು. ಅಷ್ಟರಲ್ಲೇ ಹಕ್ಕುಭಾದ್ಯತೆಗಳ ಸಮಿತಿ ಸಭೆಗೆ ಹಾಜರಾದ ಸಿಂಧೂರಿ ಕ್ಷಮಾಪಣೆ ಕೇಳಿದ್ದು, ಇನ್ನು ಮುಂದೆ ಯಾವುದೇ ಸಮಿತಿ, ಶಾಸಕರೊಂದಿಗೆ ಅಗೌರವದಿಂದ ನಡೆದುಕೊಳ್ಳುವುದಿಲ್ಲ. ಸರ್ಕಾರದ ಶಿಷ್ಟಾಚಾರ ಪರಿಪಾಲನೆ ಮಾಡುತ್ತೇನೆ ಎಂದು ತಪ್ಪೊಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರೋಹಿಣಿ ಸಿಂಧೂರಿ ಸ್ವಾರಿ ಕೇಳಿದ ಸಮಿತಿಯ ವರದಿ ಬಹಿರಂಗವಾಗಿದೆ.
ರೋಹಿಣಿ ಸಿಂಧೂರಿ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಸರಕಾರಿ ಜಾಗೆ ಅಕ್ರಮ ಒತ್ತುವರಿ ಹಾಗೂ ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಅವರು ತೆಗೆದುಕೊಂಡ ಕೆಲ ಕ್ರಮಗಳು ಸಾ.ರಾ. ಮಹೇಶರನ್ನು ಕೆರಳಿಸಿದ್ದವು.
ಈ ವಿಚಾರವಾಗಿ ಶಾಸಕರು ಜಿಲ್ಲಾಧಿಕಾರಿ ವಿರುದ್ಧ ತಿರುಗಿ ಬಿದ್ದಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಡಿಸಿ ರೋಹಿಣಿ ಸಿಂಧೂರಿ ಸಾ.ರಾ. ಅವರಿಗೆ ಸೇರಿದ ಚೌಟ್ರಿ ಒತ್ತುವರಿ ಜಾಗದಲ್ಲಿ ನಿರ್ಮಾಣವಾಗಿದೆ ಎಂದು ಆರೋಪಿಸಿದ್ದರು.
ಇದರಿಂದ ತೀವ್ರ ಕೆಂಡಾಮಂಡಲವಾಗಿದ್ದ ಸಾ.ರಾ.ಮಹೇಶ್, ಇಲಾಖೆಗೆ ಬ್ಯಾಗ್ ವಿತರಣೆಯಲ್ಲಿ ಜಿಲ್ಲಾಧಿಕಾರಿ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಬಹಿರಂಗ ಆರೋಪ ಮಾಡಿ ಸದನದಲ್ಲೂ ವಿಷಯ ಪ್ರಸ್ತಾಪಿಸಿದ್ದರು.