ವಿಜಯಸಾಕ್ಷಿ ಸುದ್ದಿ, ಗದಗ
ಭಾನುವಾರ ರಾತ್ರಿ ರೌಡಿ ಶೀಟರ್ ಮುತ್ತು ಅಲಿಯಾಸ್ ಗೋವಿಂದಪ್ಪ ಯಲ್ಲಪ್ಪ ಚಲವಾದಿಯ ಕೊಲೆ ಪ್ರಕರಣ ಬೇಧಿಸಿರುವ ಪೊಲೀಸರು, ರೌಡಿ ಶೀಟರ್ ಪ್ರಕಾಶ್ ಕೋರಿಶೆಟ್ಟರ್ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.
ಅಮೀರಸೋಹೈಲ್ ನದಾಫ್, ಪ್ರವೀಣ್ ಸಕ್ರಿ ಬಂಧಿತ ಇನ್ನಿಬ್ಬರು ಆರೋಪಿಗಳು.
ಇಂದು ಎಸ್ಪಿ ಕಚೇರಿಯಲ್ಲಿ ಮಾಹಿತಿ ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಯತೀಶ ಎನ್, ಕೊಲೆ ನಂತರ ಆರೋಪಿಗಳ ಬಂಧನಕ್ಕೆ ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ ಅವರಿಗೆ ಪ್ರಕರಣದ ತನಿಖೆಯ ಉಸ್ತುವಾರಿ ವಹಿಸಲಾಗಿತ್ತು.
ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ ಅವರು, ಶಹರ ಠಾಣೆ ಇನ್ಸ್‌ಪೆಕ್ಟರ್ ಪಿ ವಿ ಸಾಲಿಮಠ, ಬೆಟಗೇರಿ ಸಿಪಿಐ ಬಿ ಜಿ ಸುಬ್ಬಾಪೂರಮಠ, ಶಹರ ಠಾಣೆಯ ಪಿಎಸ್ಐ ಗಿರಿಜಾ ಜಕ್ಕಲಿ ಅವರ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಲಾಗಿತ್ತು.
ಪ್ರಕರಣದ ತನಿಖೆ ಕೈಗೆತ್ತಿಕೊಂಡು ಮೂರು ತಂಡಗಳು ಆರೋಪಿಗಳ ಹೆಡಮುರಿ ಕಟ್ಟಿ ಕೊಲೆಯ ಬಗ್ಗೆ ಬಾಯಿ ಬಿಡಿಸಿದ್ದಾರೆ.
ಸಂಶಯಾಸ್ಪದವಾಗಿ ತಲೆಮರೆಸಿಕೊಂಡು ತಿರುಗಾಡುತ್ತಿದ್ದ ಸಿಮೆಂಟ್ ವ್ಯಾಪಾರಿ, ರೌಡಿ ಶೀಟರ್, ಬಯಲು ಆಂಜನೇಯ ದೇವಸ್ಥಾನದ ಬಳಿ ನಿವಾಸಿ ಪ್ರಕಾಶ್ @ ಫಕ್ಕೀರೇಶ್ @220 ಫಕ್ಕ್ಯಾ ತಂದೆ ಬಸವರಾಜ್ ಕೋರಿಶೆಟ್ಟರ್, ವಿವೇಕಾನಂದ ನಗರದ ಪ್ರವೀಣ್ @ ಪವನ್ ಯಮನಪ್ಪ ಸಕ್ರಿ, ಇನ್ಬೊಬ್ಬ ಹೊಟೇಲ್ ವೊಂದರಲ್ಲಿ ಸಪ್ಲಾಯರ್ ಆಗಿದ್ದ ಕಮ್ಮಾರ ಸಾಲಿನ ಅಮೀರಸೋಹೈಲ್ ಸುಭಾನಸಾಬ್ ನದಾಫ್ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ ಕೊಲೆಗೆ ಬಳಸಿದ ಎರಡು ಚಾಕು ಹಾಗೂ ಡಿಯೋ ಮೋಟಾರ್ ಸೈಕಲ್ ವಶಪಡಿಸಿಕೊಳ್ಳಲಾಗಿದೆ.
ಕೊಟ್ಟ ಹಣ ಕೇಳಿದಾಗ ಮುತ್ತು ಚಲವಾದಿ ಸತಾಯಿಸಿದ್ದಲ್ಲದೇ ನಿನ್ನನ್ನೇ ಮುಗಿಸುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಕ್ಕೆ ಪ್ರಕಾಶ್ ಕೋರಿಶೆಟ್ಟರ್ ಈ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಇನ್ನೊಬ್ಬ ಆರೋಪಿ ಪ್ರವೀಣ್ ಸಕ್ರಿಗೆ ಪದೇ ಪದೇ ಜೀವ ಬೆದರಿಕೆ ಹಾಕುತ್ತಿದ್ದ ಆ ಕಾರಣಕ್ಕಾಗಿ ನಾನು ಕೊಲೆ ಮಾಡಿದ್ದೇನೆ ಎಂದು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ ಎಂದು ಎಸ್ಪಿ ಯತೀಶ್ ಎನ್ ಮಾಹಿತಿ ನೀಡಿ ಪೊಲೀಸರ ಕಾರ್ಯಾಚರಣೆಯನ್ನು ಶ್ಲಾಘಿಸಿದರು.
ಅಮೀರಸೋಹೈಲ್ ನದಾಫ್ ಎಂಬಾತ ಇಬ್ಬರು ಆರೋಪಿಗಳೊಂದಿಗೆ ಸಹಾಯ ಮಾಡಿದ್ದಾನೆ ಎನ್ನಲಾಗಿದೆ.
ಕೊಲೆಯ ನಂತರ ಹುಲಕೋಟಿ ಬಳಿಯ ಟೆಕ್ಸ್ ಟೈಲ್ ಮಿಲ್ ಬಳಿ ತಲೆ ಮರೆಸಿಕೊಂಡಿದ್ದ ಆರೋಪಿಗಳನ್ನು ಇನ್ಸ್‌ಪೆಕ್ಟರ್ ಸಾಲಿಮಠ ಬಂಧಿಸಿದ್ದಾರೆ.
ಕೊಲೆ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಿದ್ದಕ್ಕಾಗಿ ಬೆಳಗಾವಿ ಉತ್ತರ ವಲಯದ ಐಜಿಪಿ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.