ಒಂದು ಸ್ಕಾರ್ಪಿಯೋ, ನಾಲ್ಕು ಕಂಪ್ಯೂಟರ್ ಜಪ್ತಿ
ವಿಜಯಸಾಕ್ಷಿ ಸುದ್ದಿ, ಗದಗ
ಕೃಷಿ ಉತ್ಪನ್ನ ಮಾರುಕಟ್ಟೆಗೆ ಭೂಮಿ ನೀಡಿದ ದೂರುದಾರನಿಗೆ ಹಣ ಕೊಡದ ಎಪಿಎಂಸಿಯ ಕಚೇರಿ ವಸ್ತುಗಳನ್ನು ದೂರುದಾರ ಪರ ವಕೀಲರು ಜಪ್ತಿ ಮಾಡಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಪ್ರಧಾನ ದಿವಾಣಿ ನ್ಯಾಯಾಧೀಶರು ಹಿರಿಯ ವಿಭಾಗ ಆದೇಶದಂತೆ ಎಪಿಎಂಸಿ ಅಧಿಕಾರಿಯ ಒಂದು ಸ್ಕಾರ್ಪಿಯೋ ವಾಹನ, ನಾಲ್ಕು ಕಂಪ್ಯೂಟರ್‌ಗಳನ್ನು ಸೋಮವಾರ ಜಪ್ತಿ ಮಾಡಲಾಗಿದೆ.
ಗದಗ ಎಪಿಎಂಸಿಗೆ 1977ರಲ್ಲಿ ಆರ್. ಆರ್. ಹೇಮಂತನವರ ಎಂಬುವವರು 4 ಎಕರೆ 35 ಗುಂಟೆ ಜಮೀನು ನೀಡಿದ್ದರು. ಸರ್ಕಾರದ ಮೌಲ್ಯಮಾಪನದ ಪ್ರಕಾರ 1982ರಲ್ಲಿ ಎಪಿಎಂಸಿಯವರು ಶೇ.50ರಷ್ಟು ಹಣ ತುಂಬಿದ್ದರು. ಆದರೆ, ಮೌಲ್ಯಮಾಪನ ಕಡಿಮೆಯಾಗಿದ್ದರಿಂದ ಸಿವಿಲ್ ಕೋರ್ಟ್ ಮೊರೆ ಹೋಗಲಾಗಿತ್ತು. ಸಿವಿಲ್ ಕೋರ್ಟ್ ಒಂದು ಸ್ಕ್ವೇರ್ ಫೀಟ್‌ಗೆ ಏಳು ರೂ. ನಿಗದಿಪಡಿಸಿತ್ತು. ಬಳಿಕ ಎಪಿಎಂಸಿಯವರು ಹೈಕೋರ್ಟ್ ಮೊರೆ ಹೋಗಿದ್ದರು, ಅಲ್ಲಿ ಸ್ಕ್ವೇರ್ ಫೀಟ್‌ಗೆ 6 ರೂ. ನಿಗದಿಯಾಯಿತು. ಪುನಃ ಎಪಿಎಂಸಿಯವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಸರ್ವೋಚ್ಛ ನ್ಯಾಯಾಲಯ ಈ ಪ್ರಕರಣದ ತನಿಖೆ ನಡೆಸುವಂತೆ ಸಿವಿಲ್ ಕೋರ್ಟ್‌ಗೆ ವರ್ಗಾವಣೆ ಮಾಡಿತ್ತು.
ಸುಪ್ರೀಂಕೋರ್ಟ್ ಆದೇಶದಂತೆ ಪ್ರಕರಣದ ವಿಚಾರಣೆ ನಡೆಸಿದ ಸಿವಿಲ್ ಕೋಟ್ ಒಟ್ಟು 4 ಎಕರೆ 35 ಗುಂಟೆ ಜಮೀನಿಗೆ ಪ್ರತಿ ಸ್ಕ್ವೇರ್ ಫೀಟ್‌ಗೆ 8 ರೂ.50 ಪೈಸೆದಂತೆ 16 ಲಕ್ಷ 50 ಸಾವಿರ ರೂ. ಮೌಲ್ಯಮಾಪನ ಮಾಡಿ ಹಣ ತುಂಬುವಂತೆ ಎಪಿಎಂಸಿ ಅವರಿಗೆ 2019ರಲ್ಲಿಯೇ ನ್ಯಾಯಾಲಯ ಆದೇಶ ನೀಡಿತ್ತು. ಆದರೆ, ಎಪಿಎಂಸಿಯವರು ಹಣ ಪಾವತಿಸಲು ಸತಾಯಿಸಿದ್ದರು. ಹೀಗಾಗಿ ಈ ಹಿಂದೆ ಎಪಿಎಂಸಿ ಅಧಿಕಾರಿಯ ಮೇಲೆ ಕೋರ್ಟ್ ಅರೆಸ್ಟ್ ವಾರೆಂಟ್ ಜಾರಿಗೊಳಿಸಿತ್ತು. ಆಗ ಎಪಿಎಂಸಿಯ ಅಧಿಕಾರಿ ಕಚೇರಿಗೆ ಬರದೇ ಸುಮಾರು 15 ದಿನಗಳವರೆಗೆ ಕಚೇರಿಯಿಂದ ದೂರವೇ ಉಳಿದಿದ್ದರು. ಹೀಗಾಗಿ ಇದೀಗ ಕೋರ್ಟ್ ಆದೇಶದಂತೆ ಕಚೇರಿ ಸಲಕರಣೆಗಳನ್ನು ಜಪ್ತಿ ಮಾಡಲಾಗಿದೆ ಎಂದು ದೂರುದಾರ ಪರ ವಕೀಲ ಎಸ್.ಎಸ್.ಹುರಕಡ್ಲಿ ತಿಳಿಸಿದ್ದಾರೆ.
ಸುಮಾರು 35 ವರ್ಷಗಳಿಂದ ದೂರುದಾರರ ಜಮೀನು ಹೋಗಿದೆ. ಸಿವಿಲ್ ಕೋರ್ಟ್ ಹಣ ತುಂಬುವಂತೆ ಆದೇಶ ಮಾಡಿದ್ದರೂ, ಎಪಿಎಂಸಿಯವರು ಹಣ ತುಂಬುತ್ತಿಲ್ಲ. ಇದರಿಂದ ಪ್ರಕರಣ ಬೆಳೆಯುತ್ತಾ ಹೋಗುತ್ತಿದೆ. ಹೀಗಾಗಿ ಕಚೇರಿಯ ಸಲಕರಣೆಗಳನ್ನು ಜಪ್ತಿ ಮಾಡಿದೆ. ಕೋರ್ಟ್ ಆದೇಶ ನೀಡಿರುವಷ್ಟೇ ಗಣ ತುಂಬಿದರೂ ಸಹಿತ ರಾಜಿ ಸಂಧಾನ ಮಾಡಿಕೊಳ್ಳಲಾಗುತ್ತದೆ.
ಎಸ್ ಎಸ್ ಹುರಕಡ್ಲಿ, ದೂರದಾರ ಪರ ವಕೀಲರು