ಅನುಮಾನ ಹೆಚ್ಚಿಸಿದ ಪೊಲೀಸರ ನಡೆ
ವಿಜಯಸಾಕ್ಷಿ ಸುದ್ದಿ, ಗದಗ:
ಅವಳಿ ನಗರದಲ್ಲಿ ಸಂಚಲನ ಮೂಡಿಸಿರುವ ಸಂತೋಷ ಕರಿಕಿಕಟ್ಟಿ ಅಸಹಜ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದಿರುವ ಮರಣೋತ್ತರ ಪರೀಕ್ಷೆ ಹೊಸ ಅನುಮಾನ ಮೂಡಿಸಿದ್ದು, ಪ್ರಕರಣ ಇನ್ನೂ ಜೀವಂತವಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.
ಮನೆಯ ಕಬ್ಜಾವತ್ತಿ ವಿವಾದಕ್ಕೆ ಸಂಬಂಧಿಸಿ ವಿಚಾರಣೆಗಾಗಿ ಸಂತೋಷ ಶಹರ ಪೊಲೀಸ್ ಠಾಣೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಎದೆ ನೋವು ಕಾಣಿಸಿಕೊಂಡಿದೆ. ನಾವೇ ಆತನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು ಎನ್ನುತ್ತಾರೆ ಪೊಲೀಸರು. ಹಾಗಾದರೆ ಹೃದಯಾಘಾತದಿಂದ ಮೃತಪಟ್ಟವನ ಮರಣೋತ್ತರ ಪರೀಕ್ಷೆ ನಡೆಸುವ ಅನಿವಾರ್ಯ ಏನಿತ್ತು ಎನ್ನುವುದು ಸದ್ಯದ ಪ್ರಶ್ನೆ.
ಹೊಸ ಸಂಪ್ರದಾಯ?:
ಪೊಲೀಸ್ ಠಾಣೆಗೆ ಭೇಟಿ ನೀಡುವ ವ್ಯಕ್ತಿಗೆ ಒಂದು ವೇಳೆ ಹೃದಯಾಘಾತವಾದರೆ ಅಂಥವರ ಮರಣೋತ್ತರ ಪರೀಕ್ಷೆ ನಡೆಸುವ ಹೊಸ ಸಂಪ್ರದಾಯವನ್ನು ಗದಗ ಪೊಲೀಸರು ಹುಟ್ಟುಹಾಕಿದ್ದಾರೆಯೆ ಎನ್ನುವ ಅನುಮಾನ ಶುರುವಾಗಿದೆ.
ಪೊಲೀಸರು ಹೇಳುವ ಪ್ರಕಾರ ಸಂತೋಷ ಎದೆನೋವಿನಿಂದ ಅಥವಾ ಪಿಟ್ಸ್ ಬಂದಿದ್ದರಿಂದ ಮೃತಪಟ್ಟಿದ್ದಾನೆ. ಆದರೆ, ಹಾಗೆ ಅನಾರೋಗ್ಯ ಅಥವಾ ಸಹಜವಾಗಿ ಮೃತಪಟ್ಟಿದ್ದರೂ ಕುಟುಂಬದವರ ಒಪ್ಪಿಗೆ ಪಡೆಯದೆ ತರಾತುರಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದೇಕೆ? ಸಂತೋಷನ ಮೃತದೇಹವನ್ನು ಹೂಳದೆ ಸುಟ್ಟು ಹಾಕುವಂತೆ ಕುಟುಂಬಸ್ಥರ ಮೇಲೆ ಬಾಹ್ಯ ಒತ್ತಡ ತಂದಿದ್ದೇಕೆ ಎನ್ನುವ ಪ್ರಶ್ನೆಗಳು, ಆರೋಪಗಳು ಕೇಳಿಬರುತ್ತಿವೆ.
ತಾಯಿ ಸಹಿ ಪಡೆಯಲೂ ಆತುರ
ಅಲ್ಲದೆ, ಪ್ರಕರಣಕ್ಕೆ ತೆರೆ ಎಳೆಯಲು ಸಂತೋಷ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂಬುದಕ್ಕೆ ಆತುರಾತುರವಾಗಿ ಗ್ರೇಡ್ -2 ತಹಸೀಲ್ದಾರ ಅವರ ಸಮ್ಮುಖದಲ್ಲಿ ಅ. 5ರ ಬೆಳಗ್ಗೆ ಸಾಕ್ಷಿದಾರರ ಹೇಳಿಕೆ ಎಂಬ ಪತ್ರದಲ್ಲಿ ಮೃತನ ತಾಯಿ ಅನಸಮ್ಮಳ ಸಹಿ ಪಡೆದುಕೊಂಡಿರುವ ಗದಗ ಶಹರ ಪೊಲೀಸರ ನಡೆ ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ.
ಇದನ್ನೂ ಓದಿ ‘ಪೊಲೀಸ್ ಸ್ಟೇಶನ್’ಗೆ ಹೋದ ಮಗ, ಮನೆಗೆ ಹೆಣವಾಗಿ ಬಂದ್ನೋ ಎಪ್ಪಾ!’ ನ್ಯಾಯಕ್ಕಾಗಿ ಅಂಗಲಾಚುತ್ತಿರುವ ತಾಯಿ
ಸಂತೋಷನ ಕುಟುಂಬದವರ ಪ್ರಕಾರ ಮನೆಯಿಂದ ಹೋಗುವಾಗ ಆರೋಗ್ಯವಾಗಿಯೇ ಇದ್ದ. ಪೊಲೀಸ್ ಠಾಣೆಗೆ ಹೋಗಿ ಸ್ವಲ್ಪ ಹೊತ್ತಿನಲ್ಲೇ ಎದೆನೋವು ಕಾಣಿಸಿಕೊಂಡಿದೆ ಎಂದು ಪೊಲೀಸ್ ದಾಖಲೆಗಳು ಹೇಳುತ್ತವೆ. ಮತ್ತೊಂದೆಡೆ ಸಂತೋಷನದ್ದೇ ಎನ್ನಲಾದ ಪೋನ್ ಸಂಭಾಷಣೆಯಲ್ಲಿ ಪೊಲೀಸರು ಹೊಡೆದಿರುವ ಏಟಿಗೆ ಎದೆ ನೋಯಿಸುತ್ತಿದೆ, ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಗೋಗರೆಯುತ್ತಿರುವ ಆಡಿಯೋ ಕೂಡ ವೈರಲ್ ಆಗಿದೆ.
20 ನಿಮಿಷ ವಿಳಂಬವೇಕೆ?
ಈ ಪ್ರಕರಣದಲ್ಲಿ ಪೊಲೀಸ್ ಮೂಲಗಳನ್ನೇ ಒಪ್ಪಿಕೊಳ್ಳುವುದಾದರೆ, ‘ಸಂತೋಷನಿಗೆ ಹೃದಯಾಘಾತ ಆಗಿದ್ದು ಎಷ್ಟು ಹೊತ್ತಿಗೆ?, ಪೊಲೀಸರ ಮತ್ತು ವೈದ್ಯರ ಹೇಳಿಕೆ ಪ್ರಕಾರ ಸಂತೋಷ ಸಾವನ್ನಪ್ಪಿದ್ದು 6.40ಕ್ಕೆ. ಆದರೆ, ಪೊಲೀಸರು ಆತನ ಕುಟುಂಬದವರಿಗೆ ಕರೆ ಮಾಡಿ ಸಾವಿನ ಸುದ್ದಿ ತಿಳಿಸಿದ್ದು 7 ಗಂಟೆಗೆ.
ಇದನ್ನೂ ಓದಿ ಪ್ಲೀಸ್, ಇಲ್ಲಿಂದ ನನ್ನ ಬಿಡಿಸಿಕೊಂಡು ಹೋಗಿ; ಪೊಲೀಸರ ಕ್ರೌರ್ಯದ ಬಗ್ಗೆ ನೋವು ತೋಡಿಕೊಂಡಿರುವ ಸಂತೋಷ್!
ಹೃದಯಾಘಾತದಿಂದಲೇ ಸಂತೋಷ ಸಾವನ್ನಪ್ಪಿದ್ದ ಎಂದ ಮೇಲೆ, ಮೃತನ ತಾಯಿ ಹೇಳುವಂತೆ, ಸಾವಿನ ಸುದ್ದಿ ತಿಳಿಸಲು 20 ನಿಮಿಷ ಕಾಲಾವಕಾಶ ತೆಗೆದುಕೊಂಡಿದ್ದು ಏಕೆ? ಎಂಬಿತ್ಯಾದಿ ಸಂಶಯಾತ್ಮಕ ಪ್ರಶ್ನೆಗಳು ಸಹಜವಾಗಿಯೇ ಮೂಡುತ್ತವೆ.
ಗೋಲ್ಡನ್ ಅವರ್’ ಗೊತ್ತಿಲ್ಲವೇ?
ಇನ್ನು ಹೃದಯಾಘಾತವಾದ ಅರ್ಧಗಂಟೆ ‘ಗೋಲ್ಡನ್ ಟೈಂ ಅಂತಾ ಹೇಳುತ್ತಾರೆ. ಮೊನ್ನೆಯಷ್ಟೇ ಹೃದಯಾಘಾತದಿಂದ ನಟ ಪುನೀತ್ ರಾಜ್‌ಕುಮಾರ ಅವರನ್ನು ಕಳೆದುಕೊಂಡ ಉದಾಹರಣೆ ನಮ್ಮೆದುರಿಗೆ ಇದೆ. ಇವೆಲ್ಲ ಪೊಲೀಸರ ಗಮನಕ್ಕಿದ್ದರೂ ಸಂತೋಷನಿಗೆ ಹೃದಯಾಘಾತ ಸಂಭವಿಸಿದಾಗ ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗದೆ ದೂರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದು ಏಕೆ? ಎಂಬ ಜನರ ಪ್ರಶ್ನೆಗಳಿಗೆ ಪೊಲೀಸರೇ ಉತ್ತರಿಸಬೇಕಿದೆ.