ದೇವನಹಳ್ಳಿ: ವಿದೇಶದಿಂದ ಅಕ್ರಮವಾಗಿ ತಂದಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಮಾದಕ ವಸ್ತುವನ್ನು ಕಸ್ಟಮ್ಸ್ ಅಧಿಕಾರಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಂಡಿದ್ದಾರೆ.
ಬ್ಯಾಂಕಾಕ್ನಿಂದ ಬೆಂಗಳೂರಿಗೆ ಬಂದಿದ್ದ ಪ್ರಯಾಣಿಕನ ಲಗೇಜ್ ಬ್ಯಾಗ್ನಲ್ಲಿ ಅಡಗಿಸಿಟ್ಟಿದ್ದ 12.07 ಕೆಜಿ ಹೈಡ್ರೋಪೋನಿಕ್ ಗಾಂಜಾವನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ವಶಪಡಿಸಿಕೊಂಡ ಮಾದಕ ವಸ್ತುವಿನ ಮೌಲ್ಯ ಸುಮಾರು 4 ಕೋಟಿ 22 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
ಪ್ರಯಾಣಿಕರ ತಪಾಸಣೆ ವೇಳೆ ಅನುಮಾನಗೊಂಡ ಕಸ್ಟಮ್ಸ್ ಅಧಿಕಾರಿಗಳು ಬ್ಯಾಗ್ ಪರಿಶೀಲಿಸಿದಾಗ ಮಾದಕ ವಸ್ತು ಪತ್ತೆಯಾಗಿದೆ. ಈ ಸಂಬಂಧ ಆರೋಪಿಯನ್ನು ಎನ್ಡಿಪಿಎಸ್ ಕಾಯ್ದೆಯಡಿ ಬಂಧಿಸಿ ತನಿಖೆ ಮುಂದುವರಿಸಲಾಗಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇತ್ತೀಚಿನ ದಿನಗಳಲ್ಲಿ ಮಾದಕ ವಸ್ತು ಸಾಗಾಟ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಸ್ಟಮ್ಸ್ ಅಧಿಕಾರಿಗಳು ಹಲವು ಕಾರ್ಯಾಚರಣೆ ನಡೆಸಿದ್ದಾರೆ.
ಜೂನ್ 26ರಂದು ಬ್ಯಾಂಕಾಕ್ನಿಂದ ಬಂದ ಪ್ರಯಾಣಿಕನ ಬ್ಯಾಗ್ನಲ್ಲಿ ₹2.086 ಕೋಟಿ ಮೌಲ್ಯದ 5.960 ಕೆಜಿ ಹೈಡ್ರೋಪೋನಿಕ್ ಗಾಂಜಾ ಪತ್ತೆಯಾಗಿತ್ತು. ಮತ್ತೊಂದು ಪ್ರಕರಣದಲ್ಲಿ ₹5.58 ಕೋಟಿ ಮೌಲ್ಯದ 6.98 ಕೆಜಿ ಮೆಸ್ಕಲಿನ್ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿತ್ತು.
ಇದೇ ರೀತಿ ಜೂನ್ 17ರಂದು ₹5.43 ಕೋಟಿ ಮೌಲ್ಯದ 15.520 ಕೆಜಿ ಹೈಡ್ರೋಪೋನಿಕ್ ಗಾಂಜಾ ಹಾಗೂ ಜೂನ್ 29ರಂದು ಬ್ಯಾಂಕಾಕ್ನಿಂದ ಬಂದ ಪ್ರಯಾಣಿಕನಿಂದ 8 ಕೆಜಿ ತೂಕದ ₹2.80 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ ಮಾಡಲಾಗಿತ್ತು.



