ವಿಜಯಸಾಕ್ಷಿ ಸುದ್ದಿ, ಮೈಸೂರು : ಮಂಡ್ಯದಲ್ಲಿ ಹಮ್ಮಿಕೊಂಡಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಈ ಬಾರಿ ಕನ್ನಡದ ಹೋರಾಟಗಾರ ವಾಟಾಳ್ ನಾಗರಾಜ್ ಅವರನ್ನು ಆಯ್ಕೆ ಮಾಡಲಿ ಎಂದು ಮೈಸೂರಿನ ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಬನ್ನೂರು ಕೆ.ರಾಜು ಅಭಿಪ್ರಾಯಪಟ್ಟರು.
ಅವರು ಮೈಸೂರಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಕನ್ನಡ ಭವನದಲ್ಲಿ ಮೈಸೂರು ಜಿಲ್ಲಾ ಕಸಾಪ, ಕೊಪ್ಪಳದ ಕನ್ನಡ ಸಾಹಿತ್ಯ ಸಂಸ್ಕೃತಿ ಅಭಿವೃದ್ಧಿ ಟ್ರಸ್ಟ್ ಹಾಗೂ ಜಸ್ಟ್ ಮಾತ್ ಮಾತಲ್ಲಿ ಸ್ನೇಹಕೂಟ ಸಹಯೋಗದಲ್ಲಿ ರಾಜ್ಯ ಮಟ್ಟದ 11ನೇ ಸಾಂಸ್ಕೃತಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಕನ್ನಡ ನಾಡು ಹಲವು ಹತ್ತಾರು ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ನದಿ ನೀರು ಹಂಚಿಕೆ, ಗಡಿನಾಡು ಸಮಸ್ಯೆ, ಭಾಷಾ ಸಮಸ್ಯೆ ಹೀಗೆ ಹತ್ತಾರು ಜ್ವಲಂತ ಸಮಸ್ಯೆಗಳ ನಡುವೆ ಸಾಹಿತ್ಯೇತರ ವ್ಯಕ್ತಿ, ಹಿರಿಯ ಜೀವಿ ವಾಟಾಳ್ ನಾಗರಾಜ್ ಅವರನ್ನು ಆಯ್ಕೆ ಮಾಡಿದರೆ ಸೂಕ್ತ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮೈಸೂರು ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಹಿರಿಯ ಪತ್ರಕರ್ತ ರಮೇಶ್ ಸುರ್ವೆ ಮಾತನಾಡಿದರು. ಚುಸಾಪ ಸಂಸ್ಥಾಪಕ ಅಧ್ಯಕ್ಷ ಡಾ. ಎಂ.ಜೆ.ಆರ್ ಅರಸು ವಿಚಾರ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಸಾಧಕರಿಗೆ ಹಿರಿಯ ಸಮಾಜ ಸೇವಕ ಎಂ.ಬಿ. ಅಳವಂಡಿ ಪ್ರಶಸ್ತಿ ಪ್ರದಾನ ಮಾಡಿದರು.
ಡಾ. ಟಿ.ತ್ಯಾಗರಾಜು, ಡಾ. ಜಂಬಣ್ಣ ಅಂಗಡಿ ಅತಿಥಿಗಳಾಗಿ ಆಗಮಿಸಿದ್ದರು. ಸಮ್ಮೇಳನ ಸಂಚಾಲಕ ರುದ್ರಪ್ಪ ಭಂಡಾರಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಸಾಹಿತಿ ಪದ್ಮನಾಭ ಸಮಾರೋಪ ನುಡಿ ಹೇಳಿದರು. ಸಾಹಿತಿ ಸತೀಶ್ ಜವರೇಗೌಡ ಆಶಯ ನುಡಿ ಹೇಳಿದರು. ಸಾಹಿತಿ ಶಶಿಕುಮಾರ್ ಎಂ.ಎ., ಯೋಗಗುರು ನಾಗರತ್ನ ಹಿರೇಮಠ ಅತಿಥಿಗಳಾಗಿ ಭಾಗವಹಿಸಿದ್ದರು.
ಸಾಹಿತಿ ಎಂ.ಬಿ. ಜಯಶಂಕರ್ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿ, ನಾಡು-ನುಡಿ, ಪರಂಪರೆಗೆ ಹೆಸರಾದ ಮೈಸೂರಿನಲ್ಲಿ ಸಾಂಸ್ಕೃತಿಕ ಸಮ್ಮೇಳನ ಆಯೋಜಿಸುವ ಮೂಲಕ ಸಾಂಸ್ಕೃತಿಕ ಪ್ರತಿಭೆಗಳಿಗೆ ಉತ್ತಮ ವೇದಿಕೆ ಒದಗಿಸಿದಂತಾಗಿದೆ ಎಂದರು.