HomeGadag News‘133 ದಿನ 92 ಪ್ರಕರಣ, ಒಂದೂ ಸಾವಿಲ್ಲ; ಜಿಲ್ಲೆಯಲ್ಲಿ ಎರಡಂಕಿ ದಾಟದ ಸೋಂಕಿತರು

‘133 ದಿನ 92 ಪ್ರಕರಣ, ಒಂದೂ ಸಾವಿಲ್ಲ; ಜಿಲ್ಲೆಯಲ್ಲಿ ಎರಡಂಕಿ ದಾಟದ ಸೋಂಕಿತರು

Spread the love

ಕೋವಿಡ್ 2ನೇ ಅಲೆಯ ನಿಯಂತ್ರಣಕ್ಕೆ ಮುಂಜಾಗೃತಾ ಕ್ರಮ
ಕೊರೋನಾ ಲಸಿಕೆ ವಿತರಣೆ: ಜಿಲ್ಲೆಯಲ್ಲಿ ಶೇ.73ರಷ್ಟು ಸಾಧನೆ

ದುರುಗಪ್ಪ ಹೊಸಮನಿ

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯಲ್ಲಿ ಕಳೆದ ನಾಲ್ಕೈದು ತಿಂಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ಇಳಿಕೆಯಾಗಿದ್ದು, ಎರಡಂಕಿ ದಾಟುತ್ತಿಲ್ಲ. ಕೊರೊನಾ ಸೋಂಕಿತರ ಇಳಿಕೆಯ ಜೊತೆಗೆ ಗುಣಮುಖರ ಸಂಖ್ಯೆಯೂ ಅಷ್ಟೇ ಶರವೇಗದಲ್ಲಿ ಏರಿಕೆಯಾಗುತ್ತಿದೆ.

ದಿನ ಒಂದಕ್ಕೆ ಕೇವಲ ಒಂದೆರೆಡು ಸಕ್ರಿಯ ಪ್ರಕರಣಗಳು ಮಾತ್ರ ವರದಿಯಾಗುತ್ತಿರುವುದು ಜಿಲ್ಲೆಯ ಜನರಲ್ಲಿ ಹರ್ಷವನ್ನುಂಟು ಮಾಡಿದೆ. ಅಲ್ಲದೇ, ಕೋವಿಡ್ ನಿಯಂತ್ರಿಸುವಲ್ಲಿ ಜಿಲ್ಲಾಡಳಿತದ ಕಾರ್ಯವೈಖರಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ದೇಶದಲ್ಲಿ ಲಾಕಡೌನ್ ಜಾರಿಯಾಗಿ ಒಂದು ತಿಂಗಳ ಬಳಿಕ ಕಳೆದ ವರ್ಷ ಏಪ್ರಿಲ್‌ನಲ್ಲಿ ಗದಗ ನಗರದ ರಂಗನವಾಡಿಯ ಮಹಿಳೆಯಲ್ಲಿ ಮೊದಲ ಕೊರೊನಾ ಸಕ್ರಿಯ ಪ್ರಕರಣ ಪತ್ತೆಯಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸುಮಾರು 65 ವರ್ಷದ ಮಹಿಳೆ ಏಪ್ರಿಲ್‌ನಲ್ಲೇ ಮೃತಪಟ್ಟಿದ್ದಳು. ಇದು ಜಿಲ್ಲೆಯ ಜನರನ್ನು ಆತಂಕಕ್ಕೀಡು ಮಾಡಿತ್ತು.

ಫೆ.23ರವರೆಗೆ ಜಿಲ್ಲೆಯಲ್ಲಿ ಒಟ್ಟು 2,40,767 ಜನರು ಕೊರೊನಾ ನಿಗಾಕ್ಕೆ ಒಳಗಾಗಿದ್ದಾರೆ. ಸೋಂಕಿನ ಪರೀಕ್ಷೆಗಾಗಿ ಒಟ್ಟು 2,47,107 ಮಾದರಿ ಸಂಗ್ರಹಿಸಲಾಗಿದೆ. ಇಲ್ಲಿಯವರೆಗೆ ಒಟ್ಟು 2,35,940 ವರದಿಗಳು ನಕಾರಾತ್ಮಕವಾಗಿವೆ. ಇನ್ನೂ 156 ಜನರ ವರದಿ ಬರಲು ಬಾಕಿ ಇದ್ದು, ಒಟ್ಟು 11,011 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಅಲ್ಲದೇ, ಅಕ್ಟೋಬರ್ 15ರವರೆಗೆ ಒಟ್ಟು 141 ಜನರು ಕೊರೊನಾದಿಂದ ಮೃತಪಟ್ಟಿದ್ದು, ಸೋಂಕಿನಿಂದ ಒಟ್ಟು 10,862 ಗುಣಮುಖರಾಗಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ 8 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜನವರಿಯಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಒಟ್ಟು 92 ಕೊರೊನಾ ಸಕಾರಾತ್ಮಕ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ಜಿಲ್ಲೆಯಲ್ಲಿ ಒಟ್ಟು 11,011 ಕೊರೊನಾ ಪ್ರಕರಣಗಳು ಪತ್ತೆಯಾದಂತಾಗಿವೆ. ಕಳೆದ ವರ್ಷ ಅಕ್ಟೋಬರ್ 15ರವರೆಗೆ ಕೊರೊನಾದಿಂದ ಸಾವು ಸಂಭವಿಸಿದ್ದು, ಜಿಲ್ಲೆಯಲ್ಲಿ ಇದೇ ಕೊನೆಯ ಸಾವಾಗಿದೆ. ಅಲ್ಲಿಂದ ಇಲ್ಲಿಯವರೆಗೂ ಸುಮಾರು 133 ದಿನಗಳಿಂದ ಕೋವಿಡ್‌ನಿಂದ ಯಾವುದೇ ಸಾವು ಸಂಭವಿಸಿರುವ ವರದಿಯಾಗಿಲ್ಲ. ಇನ್ನು ಗಂಟಲು ದ್ರವದ ಮಾದರಿ ಪರೀಕ್ಷೆಗಳನ್ನು ನಿರಂತರವಾಗಿ ಮಾಡಲಾಗುತ್ತಿದ್ದು, ಪ್ರತಿದಿನ 1000ಕ್ಕೂ ಹೆಚ್ಚು ಗಂಟಲು ಮಾದರಿಗಳನ್ನು ಪರೀಕ್ಷಿಸಲಾಗುತ್ತಿದೆ. ಈಗಾಗಲೇ ಜಿಲ್ಲೆಯಾದ್ಯಂತ ಕೊರೊನಾ ಲಸಿಕಾ ಕಾರ್ಯಕ್ರಮ ಆರಂಭಗೊಂಡಿದ್ದು, ಶೇ.73ರಷ್ಟು ಗುರಿ ಸಾಧಿಸಿದೆ.

ನೆರೆಯ ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ಭೀತಿಯ ಶುರುವಾಗಿರುವ ಬೆನ್ನಲ್ಲೆ ಈಗಾಗಲೇ ರಾಜ್ಯ ಸರಕಾರ ಗಡಿ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಈ ನಡುವೆಯೂ ಜಿಲ್ಲೆಯ ಕೊರೊನಾ ಪ್ರಕರಣಗಳ ಸಂಖ್ಯೆ ಸಮಾಧಾನ ತಂದಿದೆ. ಅಲ್ಲದೇ, ಕೋವಿಡ್-19 ಸೋಂಕಿನ ಎರಡನೇ ಅಲೆಯ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ.

ಜಿಲ್ಲಾಡಳಿತ ಆರಂಭದಿಂದಲೂ ಕೊರೊನಾ ನಿಯಂತ್ರಣಕ್ಕಾಗಿ ಕಟ್ಟುನಿಟ್ಟಿನ ಕ್ರಮಕೈಗೊಂಡಿತ್ತು. ಕೊರೊನಾ ಸೋಂಕಿತರಿಗಾಗಿಯೇ ಪ್ರತ್ಯೇಕ ಆಸ್ಪತ್ರೆಯ ವ್ಯವಸ್ಥೆ ಮಾಡಿಕೊಳ್ಳುವ ಮೂಲಕ ಸೋಂಕಿತರ ಮೇಲೆ ಹೆಚ್ಚು ನಿಗಾವಹಿಸಿತ್ತು. ಅಲ್ಲದೇ, ಸೋಂಕಿತರ ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರನ್ನು ತ್ವರಿತವಾಗಿ ಪತ್ತೆ ಹಚ್ಚುವ ಮೂಲಕ ಕೊರೊನಾಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದೆ.

ಕೊರೊನಾ ಸಂಶಯಾಸ್ಪದ ವ್ಯಕ್ತಿಗಳನ್ನು ಗುರುತಿಸಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆ ಬರುವುದು ಅನುಮಾನ. ಆದರೂ, ಜಿಲ್ಲೆಯಲ್ಲಿ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ

ಡಾ,ಸತೀಶ್ ಬಸರಿಗಿಡದ, ಡಿಎಚ್ಒ

ಜನರಲ್ಲಿ ಜಾಗೃತಿ

ನೆರೆಯ ಕೇರಳ, ಮಹಾರಾಷ್ಟ್ರ ರಾಜ್ಯಗಳಲ್ಲಿ ಕೊರೊನಾ ಎರಡನೇ ಅಲೆ ಜೋರಾಗಿದ್ದು, ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ರಾಜ್ಯದಲ್ಲೂ ಕೋವಿಡ್-19 ಸೋಂಕು ಮರಳಿ ಅಬ್ಬರಿಸಬಹುದಾದ ಸಾಧ್ಯತೆಗಳಿದ್ದು, ಜಿಲ್ಲೆಯಲ್ಲೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಜಿಲ್ಲಾಡಳಿತ ಕೊರೊನಾ ಕುರಿತು ನಿರಂತರವಾಗಿ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರ ಮೂಲಕ ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸ್ ಬಳಕೆಯ ಕುರಿತು ಸಾರ್ವಜನಿಕರಿಗೆ ತಿಳುವಳಿಕೆ ನೀಡಲಾಗುತ್ತಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!