ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 19ನೇ ಆವೃತ್ತಿಯ ಮಿನಿ ಹರಾಜಿಗಾಗಿ ಒಟ್ಟು 1,355 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಆದರೆ ಈ ದೊಡ್ಡ ಪಟ್ಟಿಯಲ್ಲಿ ಒಂದು ಅಚ್ಚರಿಯೆಂದರೆ ಆಸ್ಟ್ರೇಲಿಯಾದ ತಾರೆ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಹೆಸರು ಕಾಣಿಸಿಕೊಳ್ಳದೆ ಇರುವುದಾಗಿದೆ.
ಕಳೆದ ಸೀಸನ್ನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿದ ಮ್ಯಾಕ್ಸ್ವೆಲ್ ಗಾಯದ ಕಾರಣದಿಂದ ಮಧ್ಯದಲ್ಲೇ ಟೂರ್ನಿಯಿಂದ ಹೊರಬಂದಿದ್ದರು. ಈ ಬಾರಿ ಫ್ರಾಂಚೈಸಿ ಅವರನ್ನು ರಿಟೈನ್ ಕೂಡ ಮಾಡಿರಲಿಲ್ಲ. ಕಳೆದ ಸೀಸನ್ನಲ್ಲಿ ಪಂಜಾಬ್ ಕಿಂಗ್ಸ್ ಪರ 7 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಗ್ಲೆನ್ ಮ್ಯಾಕ್ಸ್ವೆಲ್ ಕಲೆಹಾಕಿದ್ದು ಕೇವಲ 48 ರನ್ಗಳು ಮಾತ್ರ. ಹಾಗೆಯೇ ಒಟ್ಟು 13 ಓವರ್ಗಳನ್ನು ಎಸೆದಿದ್ದ ಅವರು ಕೇವಲ 4 ವಿಕೆಟ್ ಕಬಳಿಸಲಷ್ಟೇ ಶಕ್ತರಾಗಿದ್ದರು.
ಹೀಗಾಗಿಯೇ ಈ ಬಾರಿ ಪಂಜಾಬ್ ಕಿಂಗ್ಸ್ ಅವರನ್ನು ಬಿಡುಗಡೆ ಮಾಡಿತ್ತು. ಇದೀಗ ಡಿಸೆಂಬರ್ 16 ರಂದು ನಡೆಯಲಿರುವ ಐಪಿಎಲ್ ಮಿನಿ ಆಕ್ಷನ್ಗಾಗಿ ರಿಜಿಸ್ಟರ್ ಮಾಡಿಕೊಂಡಿರುವ 1355 ಆಟಗಾರರ ಪಟ್ಟಿ ಹೊರಬಿದಿದ್ದು, ಈ ಪಟ್ಟಿಯಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಹೆಸರು ಕಾಣಿಸಿಕೊಂಡಿಲ್ಲ. ಇದರೊಂದಿಗೆ ಮುಂಬರುವ ಐಪಿಎಲ್ ಹರಾಜಿನಲ್ಲಿ ಮ್ಯಾಕ್ಸ್ವೆಲ್ ಹೆಸರು ಕಾಣಿಸಿಕೊಳ್ಳುವುದಿಲ್ಲ ಎಂಬುದು ಖಚಿತವಾಗಿದೆ.



