ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಬಸವತತ್ವ ಮತ್ತು ನಾರಾಯಣ ಗುರುಗಳ ತತ್ವಗಳ ನಡುವೆ ಸಾಮ್ಯವಿರುವುದರಿಂದ ಸಮಾಜದಲ್ಲಿ ಸಮಾನತೆಯನ್ನು ತರುವುದಕ್ಕಾಗಿ ಬ್ರಹ್ಮಶ್ರೀ ನಾರಾಯಣ ಗುರುಗಳ ಪಾತ್ರ ಅಪಾರವಾಗಿದೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಸೋಮವಾರ ಶಿರಹಟ್ಟಿ ತಾಲೂಕಿನ ಪರಸಾಪೂರ ಗ್ರಾಮದಲ್ಲಿ ತಾಲೂಕು ಆರ್ಯ ಈಡಿಗ ಸಮಾಜದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತ್ಯುತ್ಸವ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನೂತನ ಪದಾಧಿಕಾರಿಗಳ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜಗಳು ಕೇವಲ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದರೆ ಸಾಲದು ಮಾನವೀಯ ಮೌಲ್ಯಗಳನ್ನು ಸಹ ಅಳವಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ನಾರಾಯಣ ಗುರುಗಳು ತಮ್ಮ ಭಕ್ತಿ ಕ್ರಾಂತಿಯ ಮೂಲಕ ರಾಜ್ಯದಲ್ಲಷ್ಟೇ ಅಲ್ಲದೇ ನೆರೆಯ ತಮಿಳುನಾಡು ಮತ್ತು ಕೇರಳ ರಾಜ್ಯದಲ್ಲೂ ಸಹ ಅಪಾರ ಭಕ್ತರನ್ನು ಹೊಂದಿದ್ದಾರೆ. ಹುಟ್ಟು-ಸಾವು ನಮ್ಮ ಕೈಯಲ್ಲಿಲ್ಲ, ಬದುಕು ನಮ್ಮ ಕೈಯಲ್ಲಿದ್ದು ಎಲ್ಲರೊಂದಿಗೆ ಪ್ರೀತಿ-ವಿಶ್ವಾಸ, ಸಂತೋಷ ನೆಮ್ಮದಿಯಿಂದ ಮುನ್ನಡೆಯಬೇಕು ಎಂದರು.
ಸಮಾಜದ ಯುವಕರು ಶಿಕ್ಷಣಕ್ಕೆ ಆದ್ಯತೆ ನೀಡಬೇಕು. 21ನೇ ಶತಮಾನ ಜ್ಞಾನದ ಶತಮಾನವಾಗಿದೆ. ಹೆಚ್ಚು ವಿದ್ಯಾವಂತರಾಗಿ ಸ್ವಾವಲಂಬಿ ಬದುಕನ್ನು ಸಾಗಿಸುವುದರ ಮೂಲಕ ನಾರಾಯಣ ಗುರುಗಳ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕೆಂದು ಹೇಳಿದರು.
ಶಾಸಕರಾದ ಸಿ.ಸಿ. ಪಾಟೀಲ, ಡಾ. ಚಂದ್ರು ಲಮಾಣಿ, ಶಿರಹಟ್ಟಿ ತಾಲೂಕಾ ಆರ್ಯ ಈಡಿಗ ಸಮಾಜದ ಅಧ್ಯಕ್ಷ ಶ್ರೀಕಾಂತ ಈಳಿಗೇರ, ರಾಜು ಕುರಡಗಿ, ಡಾ. ಭೀಮಸಿಂಗ್ ರಾಠೋಡ, ಎಂ.ಎಸ್. ಕರಿಗೌಡ್ರ, ಜಾನು ಲಮಾಣಿ, ಡಾ. ಗೋವಿಂದ ಬಾಬು ಪೂಜಾರಿ, ನಾಗರಾಜ ಗುತ್ತೇದಾರ, ಕೆಪಿಸಿಸಿ ಪ್ರ.ಕಾ. ಸುಜಾತಾ ದೊಡ್ಡಮನಿ, ಜಗದೀಶ ಈಳಗೇರ, ಚಂದ್ರಕಾಂತ ಹಾನಗಲ್, ಮಾರುತಿ ಈಳಗೇರ, ಯಮನಪ್ಪ ಈಳಗೇರ, ಪರಶುರಾಮ ಈಳಗೇರ, ಪಾಲಾಕ್ಷಪ್ಪ ಈಳಗೇರ, ಶರಣಪ್ಪ ಈಳಗೇರ, ಕಲ್ಲಪ್ಪ ಈಳಗೇರ, ಆಂಜನೇಯ ಈಳಗೇರ, ಹಾಲಪ್ಪ ಈಳಗೇರ, ವಿಶ್ವನಾಥ ಈಳಗೇರ, ವಿರುಪಾಕ್ಷಪ್ಪ ಈಳಗೇರ, ಬಸವರಾಜ ಈಳಗೇರ, ಪವನ ಈಳಗೇರ, ಮರಿಯಪ್ಪ ಈಳಗೇರ, ರಾಕೇಶ ಈಳಗೇರ, ನಿಂಗಪ್ಪ ಈಳಗೇರ, ಧರ್ಮಣ್ಣ ಈಳಗೇರ, ಷಣ್ಮುಖಪ್ಪ ಈಳಗೇರ, ವಿಠ್ಠಲ ಈಳಗೇರ ಮುಂತಾದವರು ಉಪಸ್ಥಿತರಿದ್ದರು.
ಶಿವಮೊಗ್ಗ ಜಿಲ್ಲೆಯ ನಿಟ್ಟೂರಿನ ನಾರಾಯಣ ಗುರು ಮಹಾಸಂಸ್ಥಾನದ ಪೀಠಾಧಿಪತಿ ರೇಣುಕಾನಂದ ಸ್ವಾಮೀಜಿ ಮಾತನಾಡಿ, ಹಿಂದುಳಿದ ಮಠಗಳು ಮುನ್ನೆಲೆಗೆ ಬರುವುದಕ್ಕಾಗಿ ಏಕಕಾಲದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ 110ಕೋಟಿ ಅನುದಾನ ನೀಡಿದ್ದರು. ಜೊತೆಗೆ ಸಮಾಜದ ನಿಗಮ ಘೋಷಣೆ ಮಾಡಿ ಸಮಾಜದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಶ್ರೀಪೀಠಕ್ಕೂ ಸಹ ಅನುದಾನ ನೀಡಿದ್ದಾರೆ. ಶಿರಹಟ್ಟಿ ಭಾಗದಲ್ಲೂ ಸಹ ನಾರಾಯಣ ಗುರುಗಳ ಸಮುದಾಯ ಭವನವನ್ನು ನಿರ್ಮಿಸಲು ಅನುದಾನ ನೀಡಬೇಕೆಂದು ಹೇಳಿದರು.