ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ವಿದ್ಯಾರ್ಥಿಗಳಲ್ಲಿ ನಾಡು-ನುಡಿ, ಸಂಸ್ಕೃತಿ ಹಾಗೂ ಸಾಹಿತ್ಯದ ಬಗ್ಗೆ ಅಭಿರುಚಿ ಮತ್ತು ಚಿಂತನಾಶೀಲ ಮನೋಭಾವ ಬೆಳೆಸಿದರೆ ಕನ್ನಡ ಭಾಷೆಯ ಅಭಿವದ್ಧಿಗೆ ಇನ್ನಷ್ಟು ಸಹಕಾರಿಯಾಗಲಿದೆ ಎಂದು ಹಿರಿಯ ಸಾಹಿತಿ ವಿ.ಕೆ. ಪಾಟೀಲ ಹೇಳಿದರು.
ಅವರು ಸಮೀಪದ ಜಕ್ಕಲಿ ಗ್ರಾಮದ ಶ್ರೀ ಅಂದಾನೆಪ್ಪ ಜ್ಞಾನಪ್ಪ ದೊಡ್ಡಮೇಟಿ ಸರಕಾರಿ ಪ್ರೌಢಶಾಲೆಯಲ್ಲಿ ರೋಣ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿದರು.
ಕನ್ನಡ ನಾಡು-ನುಡಿ, ಇತಿಹಾಸಕ್ಕೆ ತನ್ನದೇ ಆದ ವಿಶಿಷ್ಟ ಮಹತ್ವದ ಪ್ರಾಮುಖ್ಯತೆ ಇದೆ. ಬೇರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡವೇ ಶ್ರೇಷ್ಠ. ಕನ್ನಡ ನುಡಿಯೇ ಚೆಂದ. ಕನ್ನಡ ಸಂಸ್ಕೃತಿ-ಪರಂಪರೆಯೇ ಅಂದ. ಇಂಥ ಮಹೋನ್ನತ ಇತಿಹಾಸ ಹೊಂದಿರುವ ಕನ್ನಡ ಭಾಷೆಯನ್ನು ಉಳಿಸಬೇಕಾದ ಅವಶ್ಯಕತೆ ಇದೆ ಎಂದು ಪಾಟೀಲ ಪ್ರತಿಪಾದಿಸಿದರು.
ರೋಣ ಕಸಾಪ ಅಧ್ಯಕ್ಷ ರಮಾಕಾಂತ ಕಮತಗಿ ಮಾತನಾಡಿದರು. ಜಾನಪದ ಅಕಾಡೆಮಿ ಸದಸ್ಯ ಕೊತಬಾಳದ ಕಲಾವಿದ ಶಂಕ್ರಣ್ಣ ಸಂಕಣ್ಣವರ ಕನ್ನಡ ನಾಡು-ನುಡಿ ಗೀತಗಾಯನ ಹಾಡಿದರು. ಶಾಲೆಯ ಹಿರಿಯ ಶಿಕ್ಷಕಿ ಯು.ಎಸ್. ಕಣವಿಯವರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಮೇಲೆ ಜಕ್ಕಲಿ ಕಸಾಪ ಗ್ರಾಮ ಘಟಕದ ಅಧ್ಯಕ್ಷ ಪ್ರಕಾಶ ವಾಲಿ, ಸಂಗಮೇಶ ಮೆಣಸಗಿ, ಶಿವಾನಂದ ಗೋಗೇರಿ, ಶಿಕ್ಷಕಿ ಅಮೃತಾ ಕಬ್ಬೇರ, ಸುನೀತಾ ಪಾಟೀಲ ಉಪಸ್ಥಿತರಿದ್ದರು. ಶಿಕ್ಷಕ ವಿ.ವಿ. ಅಣ್ಣಿಗೇರಿ ಸ್ವಾಗತಿಸಿ, ನಿರೂಪಿಸಿದರು. ನೆಹರೂ ಮನೋಳಿ ವಂದಿಸಿದರು.
`ಕನ್ನಡ ನಾಡು ನುಡಿಯ ಹಿರಿಮೆ’ ವಿಷಯ ಕುರಿತು ಪಿ.ಆರ್. ಹಿರೇಮಠ ಮಾತನಾಡಿ, ಕಾವೇರಿಯಿಂದ ಗೋದಾವರಿಯವರೆಗೆ ಕನ್ನಡ ನಾಡು ಹಬ್ಬಿತ್ತು. ಅನೇಕ ವಿಭಾಗಗಳಲ್ಲಿ ಹರಿದು ಹಂಚಿಹೋಗಿದ್ದ ಈ ನಾಡು, ನಾಡ ಪ್ರೇಮಿಗಳು, ಸಾಹಿತಿಗಳ ಮತ್ತು ಸಂಘ-ಸಂಸ್ಥೆಗಳ ಹೋರಾಟದ ಪ್ರತಿಫಲವಾಗಿ ಭಾಷಾ ಮರು ಪ್ರಾಂತವಾಗಿ 1956ರ ನವೆಂಬರ್ 1ರಂದು ಮೈಸೂರು ರಾಜ್ಯವಾಗಿ ಉದಯವಾಯಿತು. ಆನಂತರ ಕನ್ನಡಿಗರ ಮನದಾಳದ ಅಪೇಕ್ಷೆಯಂತೆ 1973ರ ನವೆಂಬರ್ 1ರಂದು ಕರ್ನಾಟಕವೆಂದು ಮರುನಾಮಕರಣ ಮಾಡಲಾಯಿತು. ಅಂದಿನಿಂದ ರಾಜ್ಯೋತ್ಸವವ ನಾಡಿನ ಜನತೆ ಸಂಭ್ರಮದಿಂದ ಆಚರಿಸುತ್ತಿದ್ದಾರೆ ಎಂದು ಸ್ಮರಿಸಿದರು.