ಮಡಿಕೇರಿ: ಮಡಿಕೇರಿ–ಮೂರ್ನಾಡು ರಸ್ತೆಯಲ್ಲಿ ನಡೆದ ಸಿನಿಮೀಯ ಶೈಲಿಯ ಅಪಘಾತದಲ್ಲಿ ಕಾರೊಂದು ಸುಮಾರು 40 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದಿದೆ. ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದರೂ ಚಾಲಕ ಅದೃಷ್ಟವಶಾತ್ ಬದುಕುಳಿದಿದ್ದಾರೆ.
ಆಲ್ವೇಸ್ ಸರ್ವಿಸ್ ಸ್ಟೇಷನ್ ಸಮೀಪ ಮೂರ್ನಾಡು ಕಡೆಯಿಂದ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಂದಕಕ್ಕೆ ಉರುಳಿದೆ. ಅಪಘಾತದ ರಭಸಕ್ಕೆ ವಾಹನಕ್ಕೆ ಭಾರೀ ಹಾನಿಯಾಗಿದೆ.
ಸ್ಥಳೀಯರು ತಕ್ಷಣ ನೆರವಿಗೆ ಧಾವಿಸಿದ್ದು, ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಮಡಿಕೇರಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಪಘಾತದ ನಿಖರ ಕಾರಣ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



