ವಿಜಯಸಾಕ್ಷಿ ಸುದ್ದಿ, ಬಾಳೆಹೊನ್ನೂರು : ಮೌಲ್ಯಾಧಾರಿತ ಬದುಕಿಗೆ ಶಿಕ್ಷಣ ಅಗತ್ಯ. ಸಂಸ್ಕಾರಯುಕ್ತ ಶಿಕ್ಷಣದಿಂದ ಜೀವನ ಉಜ್ವಲ. ವಿದ್ಯೆ, ದುಡಿಮೆ ಮತ್ತು ತಾಳ್ಮೆ ಬದುಕಿನ ಯಶಸ್ಸಿಗೆ ಮೆಟ್ಟಿಲು ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶನಿವಾರ ಶ್ರೀ ರಂಭಾಪುರಿ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ 32ನೇ ವಾರ್ಷಿಕೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಕಣ್ಣು ಚೆನ್ನಾಗಿದ್ದರೆ ಜಗ ಚೆನ್ನಾಗಿ ಕಾಣುತ್ತದೆ. ನಾಲಿಗೆ ಚೆನ್ನಾಗಿದ್ದರೆ ಜನರಿಗೆ ಒಳ್ಳೆಯವರಾಗಿ ಕಾಣುತ್ತೇವೆ. ಕಷ್ಟ ಕಲಿಸುತ್ತದೆ. ಸುಖ ಮರೆಸುತ್ತದೆ. ಆದರೆ ಒಳ್ಳೆಯತನ ಮತ್ತು ಆತ್ಮವಿಶ್ವಾಸ ಮಾತ್ರ ಬಾನೆತ್ತರಕ್ಕೆ ಬೆಳೆಯಲು ಸಹಕರಿಸುತ್ತದೆ. ಕಷ್ಟ ಯಾವಾಗಲೂ ಸಾಗರದಷ್ಟು ಇದ್ದರೆ ಸುಖ ಸಾಸುವೆಯಷ್ಟೇ ಸಿಗುವುದು.
ಮನುಷ್ಯ ಮನಸ್ಸಿನಿಂದ ದೊಡ್ಡವನಾಗಬೇಕೇ ಹೊರತು ಬಟ್ಟೆ ಮತ್ತು ಸಿರಿ ಸಂಪತ್ತಿನಿಂದಲ್ಲ. ಎತ್ತರಕ್ಕೆ ಏರಬೇಕಾದರೆ ಮೆಟ್ಟಲು ತುಳಿಯಬೇಕೇ ವಿನಃ ಇನ್ನೊಬ್ಬರನ್ನು ತುಳಿಯಬಾರದು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಪ್ರಾರಂಭಗೊಂಡು 32 ವರ್ಷಗಳು ಪೂರ್ಣಗೊಂಡಿವೆ. ಎಲ್ಲ ಸಾಧಕರು ಶಾಂತಿ-ತಾಳ್ಮೆಯಿಂದಿದ್ದು ಆಧ್ಯಾತ್ಮ ಜ್ಞಾನ ಸಂಪತ್ತನ್ನು ಸ್ವೀಕರಿಸುವ ಸೌಭಾಗ್ಯ ಎಲ್ಲರಿಗೂ ಪ್ರಾಪ್ತವಾಗಲೆಂದರು.
ಪ್ರಾಸ್ತಾವಿಕವಾಗಿ ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಕುಲಪತಿಗಳಾದ ಬೆಳಗಾಲಪೇಟೆ ಹಿರೇಮಠದ ವಿದ್ವಾನ್ ಸಿದ್ದಲಿಂಗಯ್ಯ ಮಾತನಾಡಿದರು. ಈ ಸಂದರ್ಭದಲ್ಲಿ ಜೂನ್ ತಿಂಗಳ ‘ರಂಭಾಪುರಿ ಬೆಳಗು’ ಮಾಸ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಗುರುಕುಲ ಸಾಧಕರಿಂದ ವೇದಘೋಷ ಜರುಗಿತು. ಅರ್ಚಕ ಬಳಗದಿಂದ ಪ್ರಾರ್ಥನಾ ಗೀತೆ ಜರುಗಿತು.
ನೀಲೂರು ಹಿರೇಮಠದ ಮಡಿವಾಳ ದೇವರು ನಿರೂಪಿಸಿದರು.