ವಿಜಯಸಾಕ್ಷಿ ಸುದ್ದಿ, ಧಾರವಾಡ : ಕೃಷಿ ಪದವೀಧರರು ತಮ್ಮ ತಾಂತ್ರಿಕ ಜ್ಞಾನ ಬಳಸಿ ನಾಡಿನ ಸರ್ವತೋಮುಖ ಏಳಿಗೆಗೆ ಶ್ರಮಿಸಬೇಕು ಎಂದು ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿ ಕರೆ ನೀಡಿದರು.
ಧಾರವಾಡ ಕೃಷಿ ವಿಶ್ವವಿದ್ಯಾಲಯದ 37ನೇ ಘಟಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೃಷಿ ಪದವೀಧರರು ಉದ್ಯೋಗ ಅರಸುವ ಬದಲು ಕೆಲಸ ನೀಡುವವರಾಗಿ ಬೆಳೆಯಬೇಕು. ಕೃಷಿ ಕ್ಷೇತ್ರದಲ್ಲಿ ಮೂಲ್ಯವರ್ಧನೆ ಹಾಗೂ ಅಭಿವೃದ್ಧಿಗೆ ವ್ಯಾಪಕ ಅವಕಾಶ ಇದೆ. ಕೃಷಿ ಪದವೀಧರರು ತಮ್ಮ ಕೌಶಲ್ಯವನ್ನು ಈ ಕ್ಷೇತ್ರದ ವಿಕಾಸಕ್ಕೆ ಬಳಸಬೇಕು ಎಂದು ಸಲಹೆ ನೀಡಿದರು.
ರಾಜ್ಯ ಸರ್ಕಾರ ಸದಾ ರೈತರ ಪರವಾಗಿದೆ. ಕೃಷಿ ಕ್ಷೇತ್ರದ ಶ್ರೇಯೋಭಿವೃದ್ದಿಗೆ ಅನೇಕ ಪರಿಣಾಮಕಾರಿ ಯೋಜನೆ ಜಾರಿಗೆ ತಂದಿದೆ. ಸಿರಿ ಧಾನ್ಯಗಳ ಪ್ರೋತ್ಸಾಹ ಕಾರ್ಯಕ್ರಮಗಳಿಂದ ದೊಡ್ಡ ಯಶಸ್ಸು ಕಾಣುತ್ತಿದೆ.
ನೂರಾರು ಹೊಸ ಉದ್ಯಮ ಪ್ರಾರಂಭವಾಗಿ ಹೀಗೆ ಎಲ್ಲಾ ಕೃಷಿ ಉತ್ಪನ್ನಗಳಲ್ಲಿ ಹೊಸ ಆವಿಷ್ಕಾರ ಮತ್ತು ಬ್ರಾಂಡಿಗ್ ಅಗಬೇಕಿದೆ ಎಂದು ಅವರು ಹೇಳಿದರು.
ದೆಹಲಿಯ ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿ ಅಧ್ಯಕ್ಷ ಡಾ. ಸಂಜಯ ಕುಮಾರ ಮಾತನಾಡಿ, ಭಾರತವು 2050ಕ್ಕೆ 1.7 ಬಿಲಿಯನ್ ಜನಸಂಖ್ಯೆ ಹೊಂದಲಿದ್ದು, ಸದ್ಯದ ಬೇಡಿಕೆಯ ಶೇ 70ರಷ್ಟು ಕೃಷಿ ಉತ್ಪನ್ನಗಳ ಬೇಡಿಕೆ ಹೆಚ್ಚಲಿದೆ. ಇದನ್ನು ಎದುರಿಸಲು ಕೃಷಿ ಕ್ಷೇತ್ರದಲ್ಲಿ ಹಲವಾರು ಬದಲಾವಣೆ ತರುವ ಅಗತ್ಯವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ರಾಜ್ಯಪಾಲ ಥಾವರಚಂದ ಗೊಹ್ಲೊಟ್ ಮಾತನಾಡಿ, ಕೃಷಿ ಕ್ಷೇತ್ರವನ್ನು ಶ್ರೀಮಂತಗೊಳಿಸಲು ಯಾವ ವಿಜ್ಞಾನಿಗಳು ಮುಂದಾಗಬೇಕಿದೆ. ಆಧುನಿಕ ಕಾಲದಲ್ಲಿ ವಿವಿಧ ಮಾಲಿನ್ಯದ ನಡುವೆ ನೈಸರ್ಗಿಕ ಹಾಗೂ ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಬೇಕಿದೆ ಎಂದು ಕರೆ ನೀಡಿದರು.
ಧಾರವಾಡ ಕೃಷಿ ವಿಶ್ವವಿದ್ಯಾಲಯ ಶ್ರಿಯಾ ಎಸ್.ಕರಿ ಕೃಷಿ ಪದವಿಯಲ್ಲಿ ಒಟ್ಟು ಮೂರು ಚಿನ್ನದ ಪದಕಗಳನ್ನು ಪಡೆದರು. ಹನಮನಮಟ್ಟಿ ಕೃಷಿ ಮಹಾವಿದ್ಯಾಲಯದ ಕುಮಾರ ಮಾಹಾಂತೇಶ ಹಿರೇಮಠ ಹಾಗೂ ಸಮುದಾಯ ವಿಜ್ಞಾನ ಮಹಾವಿದ್ಯಾಲಯದ ರೋಹಿಣಿ ರಮೇಶ ಭಾವಿಕಟ್ಟಿ ತಲಾ ಎರಡು ಚಿನ್ನದ ಪದಕಗಳನ್ನು ಪಡೆದುಕೊಂಡರು.