ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ನಡೆಯುತ್ತಿರುವ ಅಮೆರಿಕ–ಇಸ್ರೇಲ್ ಜಂಟಿ ಸೈನಿಕ ದಾಳಿ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ.
ಒಂದೇ ದಾಳಿಯಲ್ಲಿ ಇರಾನ್‌ನ 48 ನಾಯಕರು ಸಾವನ್ನಪ್ಪಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಕಾರ್ಯಾಚರಣೆ ನಿರೀಕ್ಷೆಗೂ ಮೀರಿದ ವೇಗದಲ್ಲಿ ಹಾಗೂ ಯಶಸ್ವಿಯಾಗಿ ಸಾಗುತ್ತಿದೆ ಎಂದು ತಿಳಿಸಿದ ಟ್ರಂಪ್, ಮುಂದಿನ ಗುರಿಗಳೂ ಅಮೆರಿಕಕ್ಕೆ ಸ್ಪಷ್ಟವಾಗಿವೆ ಎಂದು ಹೇಳಿದ್ದಾರೆ.
ಇರಾನ್ ದೊಡ್ಡ ದೇಶವಾಗಿರುವುದರಿಂದ ಈ ಸೈನಿಕ ಕಾರ್ಯಾಚರಣೆ ನಾಲ್ಕು ವಾರಗಳವರೆಗೆ ಅಥವಾ ಅದಕ್ಕಿಂತ ಕಡಿಮೆ ಅವಧಿಯಲ್ಲಿ ಪೂರ್ಣಗೊಳ್ಳಬಹುದು ಎಂದು ಅಂದಾಜಿಸಲಾಗಿದೆ. ನಮ್ಮ ಗುರಿಗಳು ಸಂಪೂರ್ಣವಾಗಿ ಸಾಧಿಸುವವರೆಗೆ ಯುದ್ಧ ಕಾರ್ಯಾಚರಣೆಗಳು ಪೂರ್ಣ ಬಲದಿಂದ ಮುಂದುವರಿಯಲಿವೆ ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ, ಇರಾನ್ ಜೊತೆ ಮುಂದಿನ ಹಂತದ ಮಾತುಕತೆಗಳಿಗೆ ಅಮೆರಿಕ ಸಿದ್ಧವಿದೆ ಎಂದ ಅವರು, ಆದರೆ ಅವರು ಈಗಲ್ಲ, ಕಳೆದ ವಾರವೇ ಮಾತುಕತೆಗೆ ಬರಬೇಕಿತ್ತು ಎಂದು ಕಠಿಣ ಸಂದೇಶ ರವಾನಿಸಿದ್ದಾರೆ.



