ಈರೋಡ್:- ಬಾಳೆಹಣ್ಣು ತಿನ್ನುವಾಗ ಉಸಿರುಗಟ್ಟಿ 5 ವರ್ಷದ ಮಗು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಈರೋಡ್‌ನಲ್ಲಿ ಜರುಗಿದೆ.
ಈರೋಡ್‌ನ ಅನ್ನೈ ಸತ್ಯ ನಗರದ ಎಂ. ಸಾಯಿಶರಣ್ ಎಂಬ ಬಾಲಕ ಮನೆಯಲ್ಲಿ ಬಾಳೆಹಣ್ಣು ತಿನ್ನುವಾಗ ಅದು ಗಂಟಲಲ್ಲಿ ಸಿಕ್ಕಿಹಾಕಿಕೊಂಡು, ಉಸಿರಾಡಲಾಗದೆ ಸಾವನ್ನಪ್ಪಿದ್ದಾನೆ.
ಪುಟ್ಟ ಬಾಲಕ ಸಾಯಿ ಶರಣ್ ಮನೆಯಲ್ಲಿ ಬಾಳೆಹಣ್ಣು ತಿನ್ನುತ್ತಿದ್ದಾಗ ಇದ್ದಕ್ಕಿದ್ದಂತೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತು. ಆತನ ಪೋಷಕರಾದ ಮಾಣಿಕ್ ಮತ್ತು ಮಹಾಲಕ್ಷ್ಮಿ ನೆರೆಹೊರೆಯವರ ಸಹಾಯದಿಂದ ಆ ಮಗುವನ್ನು ಈರೋಡ್‌ನ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಆಸ್ಪತ್ರೆಯಲ್ಲಿ ಮಗುವನ್ನು ಪರೀಕ್ಷಿಸಿದ ವೈದ್ಯರು, ಆತನ ಶ್ವಾಸನಾಳದಲ್ಲಿ ಬಾಳೆಹಣ್ಣಿನ ತುಂಡು ಸಿಲುಕಿಕೊಂಡಿರುವುದನ್ನು ಪತ್ತೆಹಚ್ಚಿದರು. ನಂತರ ವೈದ್ಯರು ಆ ಮಗುವನ್ನು ಚಿಕಿತ್ಸೆಗಾಗಿ ಈರೋಡ್ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದರು.
ಆದರೆ, ಅಲ್ಲಿ ಮಗುವನ್ನು ಪರೀಕ್ಷಿಸಿದ ವೈದ್ಯರು ಮಗು ಉಸಿರಾಡಲಾಗದೆ ಮೃತಪಟ್ಟಿದೆ ಎಂದು ಘೋಷಿಸಿದರು. ನಂತರ ಬಾಳೆಹಣ್ಣಿನ ತುಂಡನ್ನು ಮಗುವಿನ ಶ್ವಾಸನಾಳದಿಂದ ತೆಗೆದುಹಾಕಲಾಯಿತು. ಕರುಂಗಲ್‌ಪಾಳಯಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


