ಬೆಂಗಳೂರು:- ನಗರದಲ್ಲಿ 56–58 ಕೋಟಿ ರೂ. ಮೌಲ್ಯದ ಡ್ರಗ್ಸ್ ಸಿಕ್ಕಿದೆ ಎಂಬ ಮಾಹಿತಿ ಸುಳ್ಳು ಎಂದು ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ ಪೊಲೀಸರು ನೀಡಿರುವ ಮಾಹಿತಿ ತಪ್ಪಾಗಿದ್ದು, ಇತ್ತೀಚಿನ ಕಾರ್ಯಾಚರಣೆಯಲ್ಲಿ ಕೇವಲ 1.20 ಲಕ್ಷ ರೂ. ಮೌಲ್ಯದ ಸುಮಾರು 5 ಕೆ.ಜಿ ಡ್ರಗ್ಸ್ ಮಾತ್ರ ಪತ್ತೆಯಾಗಿದೆ. ಕಳೆದ ಮೂರು ತಿಂಗಳಿಂದ ಡ್ರಗ್ಸ್ ವಿರುದ್ಧ ರಾಜ್ಯದಲ್ಲಿ ನಿರಂತರ ಕಾರ್ಯಾಚರಣೆ ನಡೆಯುತ್ತಿದ್ದು, ಈ ಅವಧಿಯಲ್ಲಿ ಒಟ್ಟು 165 ಕೋಟಿ ರೂ. ಮೌಲ್ಯದ ಡ್ರಗ್ಸ್ ಸೀಜ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಆರೋಪಿಯೊಬ್ಬನ ಹೇಳಿಕೆ ಆಧರಿಸಿ ಮಹಾರಾಷ್ಟ್ರ ಹಾಗೂ ಕರ್ನಾಟಕ ಪೊಲೀಸರು ಸಂಯುಕ್ತವಾಗಿ ಕಾರ್ಯಾಚರಣೆ ನಡೆಸಿದ್ದು, ಹೊಸ ವರ್ಷದ ಆಚರಣೆಗಾಗಿ ಡ್ರಗ್ಸ್ ಸಂಗ್ರಹಿಸಲಾಗಿತ್ತು ಎಂಬ ಶಂಕೆಯೂ ವ್ಯಕ್ತವಾಗಿದೆ. ಹೊಸ ವರ್ಷಾಚರಣೆ ಹಿನ್ನೆಲೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಜೈಲು ಹಾಗೂ ಇತರೆ ಸಂವೇದನಾಶೀಲ ಪ್ರದೇಶಗಳ ಚಟುವಟಿಕೆಗಳ ಮೇಲೂ ನಿಗಾ ವಹಿಸಲಾಗಿದೆ. “ಸೆಲೆಬ್ರೇಟ್ ರೆಸ್ಪಾನ್ಸಿಬಿಲಿಟಿ” ಎಂಬ ಸಂದೇಶದೊಂದಿಗೆ ಜನರು ಜವಾಬ್ದಾರಿಯಿಂದ ಹೊಸ ವರ್ಷವನ್ನು ಆಚರಿಸಬೇಕು ಎಂದು ಗೃಹ ಸಚಿವರು ಮನವಿ ಮಾಡಿದ್ದಾರೆ.
ಮಕ್ಕಳ ಚಟುವಟಿಕೆಗಳ ಮೇಲೆ ಪಾಲಕರು ಗಮನವಿಡಬೇಕು ಹಾಗೂ ಭದ್ರತೆಗಾಗಿ ಸಾರ್ವಜನಿಕರ ಸಹಕಾರ ಅಗತ್ಯ. ಡ್ರಗ್ಸ್ ವಿರುದ್ಧ ರಾಜ್ಯದಲ್ಲಿ ವಾರ್ ಡಿಕ್ಲೇರ್ ಮಾಡಲಾಗಿದ್ದು, ನಿರ್ಲಕ್ಷ್ಯ ವಹಿಸಿದ ಡಿಸಿಪಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಎಚ್ಚರಿಕೆ ನೀಡಿದ್ದಾರೆ.



