ಮೈಸೂರು: ತಮಿಳುನಾಡು ಮೂಲದ ಮರ್ಕೆಂಟೈಲ್ ಬ್ಯಾಂಕ್‌ನ ಮೈಸೂರು ಶಾಖೆಯಲ್ಲಿ ನಡೆದ ಭಾರೀ ಚಿನ್ನ ಗಿರವಿ ವಂಚನೆ ಪ್ರಕರಣ ಬ್ಯಾಂಕಿಂಗ್ ವ್ಯವಸ್ಥೆಯೊಳಗಿನ ಅಕ್ರಮ ಚಟುವಟಿಕೆಗಳನ್ನೇ ಬಹಿರಂಗಪಡಿಸಿದೆ. ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು ₹56.78 ಲಕ್ಷ ಸಾಲ ಪಡೆದುಕೊಂಡಿರುವುದು ಇದೀಗ ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಬ್ಯಾಂಕ್ ಸಿಬ್ಬಂದಿ ಸುರೇಶ್ ಕಣ್ಣನ್ ನೀಡಿದ ದೂರಿನ ಆಧಾರದ ಮೇಲೆ ದೇವರಾಜ ಪೊಲೀಸ್ ಠಾಣೆಯಲ್ಲಿ ಏಳು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಮೈಸೂರಿನ ಅಬ್ದುಲ್ ಜಲೀಲ್ ಸೇರಿದಂತೆ ಮಂಡ್ಯ ಮತ್ತು ಬೆಂಗಳೂರು ಮೂಲದ ಆರೋಪಿಗಳು ವಿವಿಧ ಹೆಸರಿನಲ್ಲಿ ಬ್ಯಾಂಕ್‌ಗೆ ನಕಲಿ ಚಿನ್ನಾಭರಣಗಳನ್ನು ಗಿರವಿ ಇಟ್ಟಿದ್ದರು.
ಪ್ರಕರಣದ ಗಂಭೀರ ಅಂಶವೆಂದರೆ, ಬ್ಯಾಂಕ್‌ನ ಚಿನ್ನಾಭರಣ ಮೌಲ್ಯಮಾಪಕರಾಗಿದ್ದ ಟಿ.ನರಸೀಪುರದ ರವೀಂದ್ರ ಕುಮಾರ್ ಕೂಡ ಈ ವಂಚನೆಯಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿದ್ದಾರೆ. ನಕಲಿ ಚಿನ್ನವನ್ನು ನಿಜವಾದ ಚಿನ್ನವೆಂದು ಮೌಲ್ಯಮಾಪನ ಮಾಡಿ ಸಾಲ ಮಂಜೂರು ಮಾಡಲಾಗಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಒಟ್ಟು 782 ಗ್ರಾಂ ತೂಕದ ನಕಲಿ ಚಿನ್ನಾಭರಣಗಳನ್ನು ವಿವಿಧ ಖಾತೆಗಳ ಮೂಲಕ ಅಡವಿಟ್ಟು ಸಾಲ ಪಡೆದಿರುವ ಆರೋಪಿಗಳು, ಬ್ಯಾಂಕ್ ಮತ್ತು ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. 2026ರ ಜನವರಿ 26ರಂದು ಮರುಮೌಲ್ಯಮಾಪನದ ವೇಳೆ ವಂಚನೆ ಪತ್ತೆಯಾಗಿದ್ದು, ಪ್ರಕರಣ ದೊಡ್ಡ ಮಟ್ಟದ ಹಗರಣದ ಸ್ವರೂಪ ಪಡೆಯುವ ಸಾಧ್ಯತೆ ಇದೆ.
ಈ ಕುರಿತು ದೇವರಾಜ ಪೊಲೀಸರು ತನಿಖೆ ಮುಂದುವರಿಸಿದ್ದು, ಬ್ಯಾಂಕ್ ಸಿಬ್ಬಂದಿಗಳ ಪಾತ್ರ ಹಾಗೂ ವಂಚನೆ ಜಾಲದ ವ್ಯಾಪ್ತಿ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.



