ನೆಲಮಂಗಲ: ಪ್ರೀತಿಸಿ ಮದುವೆಯಾದ ದಂಪತಿಗೆ ಜಾತಿಯ ಹೆಸರಿನಲ್ಲಿ ಕಿರುಕುಳ ನೀಡಿ, ಜೀವಬೆದರಿಕೆ ಹಾಕಿರುವ ಅಮಾನವೀಯ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ನಲ್ಲಿ ಬೆಳಕಿಗೆ ಬಂದಿದೆ.
ಸುಭಾಷ್ ನಗರ ನಿವಾಸಿಗಳಾದ ಅಭಿಷೇಕ್ ಮತ್ತು ವಿದ್ಯಾಶ್ರೀ ಇಬ್ಬರು ಕೆಲಸ ಮಾಡುವ ಸ್ಥಳದಲ್ಲಿ ಪರಿಚಯವಾಗಿ ಪ್ರೀತಿಸುತ್ತಿದ್ದರು. ಕುಟುಂಬದ ವಿರೋಧದ ನಡುವೆಯೇ ಎಂಟು ತಿಂಗಳ ಹಿಂದೆ ಕರಿ ಕಾಟೇರಮ್ಮ ದೇವಾಲಯದಲ್ಲಿ ಸರಳವಾಗಿ ಮದುವೆಯಾಗಿದ್ದರು.
ವಿದ್ಯಾಶ್ರೀ ಬೇರೆ ಜಾತಿಯವರು ಎಂಬ ಕಾರಣಕ್ಕೆ ಮದುವೆಯಾದ ದಿನದಿಂದಲೇ ಅಭಿಷೇಕ್ ಪೋಷಕರಾದ ಮುನಿಶಂಕರಯ್ಯ ಮತ್ತು ಆನಂದಮ್ಮ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಸದ್ಯ ವಿದ್ಯಾಶ್ರೀ 6 ತಿಂಗಳ ಗರ್ಭಿಣಿಯಾಗಿದ್ದು, ಈ ಸಂದರ್ಭದಲ್ಲಿಯೂ ಆಕೆಯನ್ನು ಮನೆಗೆ ಸೇರಿಸಿಕೊಳ್ಳದೆ ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪತ್ನಿಯ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಪತಿ ಅಭಿಷೇಕ್ ಸ್ವಂತ ತಂದೆ-ತಾಯಿ ವಿರುದ್ಧವೇ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದು ಗಮನಾರ್ಹವಾಗಿದೆ.
ಪ್ರಕರಣ ಸಂಬಂಧ ಪೊಲೀಸರು ಎನ್ಸಿಆರ್ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.



