ಧಾರವಾಡದಲ್ಲಿ ಶೇ.74.37ರಷ್ಟು ಮತದಾನ

0
matadana
Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ : ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ 13,62,421 ಮತದಾರರು ಮತ ಚಲಾಯಿಸಿದ್ದು, ಶೇ. 74.37 ಮತದಾನ ದಾಖಲಾಗಿದೆ.

ಬೆಳಿಗ್ಗೆ 7 ಗಂಟೆಗೆ ಎಲ್ಲಾ 1872 ಮತಗಟ್ಟೆಗಳಲ್ಲೂ ಮತದಾನ ಪ್ರಾರಂಭವಾಗಿತ್ತು. ಆರಂಭದಲ್ಲಿ ವಿವಿಧ ಕಾರಣಗಳಿಂದ ಕೆಲವು ಮತಗಟ್ಟೆಗಳಲ್ಲಿ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಕಂಡುಕೊಳ್ಳಲಾಯಿತು. ಬೆಳಿಗ್ಗೆ 9 ಗಂಟೆಯ ನಂತರ ಮತದಾನ ಚುರುಕು ಪಡೆಯಿತು.

ಬೆಳಿಗ್ಗೆ 9 ಗಂಟೆವರೆಗೆ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಶೇ.9.38ರಷ್ಟು ಮತದಾನವಾಗಿತ್ತು. ಬೆಳಿಗ್ಗೆ 11 ಗಂಟೆಯ ವೇಳೆಗೆ ಶೇ.24ರಷ್ಟು ಮತದಾನ ಆಗಿತ್ತು. ಮಧ್ಯಾಹ್ನ 1 ಗಂಟೆ ವೇಳೆಗೆ ಶೇ. 40.61ರಷ್ಟು ಮತದಾನ ದಾಖಲಾಗಿತ್ತು. ಮಧ್ಯಾಹ್ನ 3 ಗಂಟೆಗೆ ಶೇ. 55ರಷ್ಟು, ಸಂಜೆ 5 ಗಂಟೆವರೆಗೆ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಶೇ.67.15 ಮತದಾನವಾಗಿತ್ತು. ಅಂತಿಮವಾಗಿ ರಾತ್ರಿ 8 ಗಂಟೆವರೆಗೆ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಶೇ.74.37ರಷ್ಟು ಮತದಾನವಾಗಿತ್ತು.

ನವಲಗುಂದ ಕ್ಷೇತ್ರದಲ್ಲಿ 1,63,948 ಮತದಾರರು ಮತ ಚಲಾಯಿಸಿದ್ದು, ಶೇ. 76.94ರಷ್ಟು ಮತದಾನವಾಗಿದೆ. ಕುಂದಗೋಳ ಕ್ಷೇತ್ರದಲ್ಲಿ 1,53,555 ಮತದಾರರು ಮತ ಚಲಾಯಿಸಿದ್ದು, ಶೇ. 80.22ರಷ್ಟು ಮತದಾನವಾಗಿದೆ. ಧಾರವಾಡ ಕ್ಷೇತ್ರದಲ್ಲಿ 1,70,305 ಮತದಾರರು ಮತ ಚಲಾಯಿಸಿ, ಶೇ. 75.75ರಷ್ಟು ಮತದಾನವಾಗಿದೆ. ಹುಬ್ಬಳ್ಳಿ ಧಾರವಾಡ (ಪೂರ್ವ) ಕ್ಷೇತ್ರದಲ್ಲಿ 1,63,406 ಮತದಾರರು ಮತ ಚಲಾಯಿಸಿದ್ದು, ಶೇ. 73.53ರಷ್ಟು ಮತದಾನವಾಗಿದೆ. ಹುಬ್ಬಳ್ಳಿ ಧಾರವಾಡ (ಸೆಂಟ್ರಲ್) ಕ್ಷೇತ್ರದಲ್ಲಿ 1,78,744 ಮತದಾರರು ಮತ ಚಲಾಯಿಸಿದ್ದು, ಶೇ. 66.88ರಷ್ಟು ಮತದಾನವಾಗಿದೆ. ಹುಬ್ಬಳ್ಳಿ ಧಾರವಾಡ (ಪಶ್ಚಿಮ) ಕ್ಷೇತ್ರದಲ್ಲಿ 1,87,895 ಮತದಾರರು ಮತ ಚಲಾಯಿಸಿ, ಶೇ. 67.09ರಷ್ಟು ಮತದಾನವಾಗಿದೆ.

ಕಲಘಟಗಿ ಕ್ಷೇತ್ರದಲ್ಲಿ 1,64,501 ಮತದಾರರು ಮತ ಚಲಾಯಿಸಿದ್ದಾರೆ ಮತ್ತು ಶೇ. 82.27ರಷ್ಟು ಮತದಾನವಾಗಿದೆ. ಶಿಗ್ಗಾಂವ ಕ್ಷೇತ್ರದಲ್ಲಿ 1,80,067 ಮತದಾರರು ಮತ ಚಲಾಯಿಸಿ, ಶೇ. 77.23ರಷ್ಟು ಮತದಾನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕ್ಷೇತ್ರದಲ್ಲಿ 9,17,926 ಪುರುಷರು, 9,13,949 ಮಹಿಳೆಯರು ಹಾಗೂ 100 ತೃತೀಯ ಲಿಂಗಿಗಳು ಸೇರಿ ಒಟ್ಟು 18,31,975 ಮತದಾರರು ಇದ್ದು, ಸದರಿ ಮತದಾನದಲ್ಲಿ 6,99,244 ಪುರುಷ, 6,63,151 ಮಹಿಳೆಯರು ಹಾಗೂ 26 ಜನ ತೃತೀಯ ಲಿಂಗಿಗಳು ಸೇರಿ ಒಟ್ಟು 13,62,421 ಮತದಾರರು ತಮ್ಮ ಹಕ್ಕು ಚಲಾಯಿಸಿ ಶೇ. 74.37ರಷ್ಟು ಮತದಾನ ದಾಖಲಿಸಿದರು. ಈ ಹಿಂದೆ 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ 17,25,335 ಮತದಾರರ ಪೈಕಿ 12,08,120 ಮತದಾರರು ಮತ ಚಲಾಯಿಸಿ ಶೇ. 70.12ರಷ್ಟು ಮತದಾನ ದಾಖಲಿಸಿದ್ದರು.

 


Spread the love

LEAVE A REPLY

Please enter your comment!
Please enter your name here