ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಹಳ್ಳದಕೇರಿಯ ಕರೇವಾಡಿಮಠದ ಲಿಂ.ಶ್ರೀ ಶಂಕರ ಶಿವಾಚಾರ್ಯ ಮಹಾಸ್ವಾಮಿಗಳವರ 77ನೇ ಪುಣ್ಯಾರಾಧನೆ ಸ್ಮರಣೋತ್ಸವ ಆ.14ರಂದು ನಡೆಯಲಿದೆ ಎಂದು ಉತ್ತರಾಧಿಕಾರಿ ಮಂಜುನಾಥಯ್ಯದೇವರು ಕರೇವಾಡಿಮಠ ತಿಳಿಸಿದ್ದಾರೆ.
ಈ ಕುರಿತು ಅವರು ಪತ್ರಿಕಾ ಹೇಳಿಕೆ ನೀಡಿ, ಮುಕ್ತಿಮಂದಿರ ಧರ್ಮಕ್ಷೇತ್ರದ ಶ್ರೀ ವಿಮಲರೇಣುಕ ವೀರ ಮುಕ್ತಿಮುನಿ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಅಂದು ಬೆಳಿಗ್ಗೆ ಪೂಜಾ ಕೈಂಕರ್ಯ ನಡೆಯಲಿದೆ. ರುದ್ರ ಬಳಗದವರಿಂದ ರುದ್ರಪಠಣ ಮತ್ತು ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ. ಸಂಜೆ 6.30ಕ್ಕೆ ಧರ್ಮಸಭೆಯ ಸಾನ್ನಿಧ್ಯವನ್ನು ಕರೇವಾಡಿಮಠದ ಶ್ರೀ ಮಳೇಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು, ಬನ್ನಿಕೊಪ್ಪದ ಜಪದ ಕಟ್ಟಿಮಠದ ಡಾ.ಸುಜ್ಞಾನ ದೇವ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸುವರು. ಸಮ್ಮುಖ ಕರೇವಾಡಿಮಠದ ನಿಯೋಜಿತ ಉತ್ತರಾಧಿಕಾರಿ ಶ್ರೀ ಮಂಜುನಾಥಯ್ಯದೇವರು ಕರೆ ವಾಡಿಮಠ, ಚಿತ್ರದುರ್ಗ ಉಜ್ಜಯನಿಮಠ ನಿಯೋಜಿತ ಉತ್ತರಾಧಿಕಾರಿ ಶ್ರೀ ಅಭಿಷೇಕ ದೇವರು ವಹಿಸುವರು.
ಗಂಜಿಗಟ್ಟಿಯ ಆರ್.ಕೃಷ್ಣಮೂರ್ತಿ ಚಿತ್ರದುರ್ಗ, ಡಾವಣಗೆರೆಯ ಪಿ.ಮೀನಾಕ್ಷಿ ಇವರಿಂದ ಜಾನಪದ ಸಂಗೀತ ಕಾರ್ಯಕ್ರಮ, ಹಾಸ್ಯ ಸಾಹಿತಿ ಪಿ.ಜಗನ್ನಾಥ ಅವರಿಂದ `ಚಿಂತೆ ಬಿಡಿ-ನಕ್ಕು ಬಿಡಿ’ ಕಾರ್ಯಕ್ರಮ, ಲಕ್ಷ್ಮೇಶ್ವದ ಶ್ರೀ ಶಾರದಾ ಸ್ವರಾಂಜಲಿ ಸಂಗೀತ ಪಾಠಶಾಲೆಯ ವಿದ್ಯಾರ್ಥಿಗಳಿಂದ ಸಂಗೀತ ಸುಧೆ, ಹಳ್ಳದಕೇರಿ ಓಣಿಯ ಶಕ್ತಿ ಭಜನಾ ಸಂಘ ಹಾಗೂ ಮಾರುತಿ ಭಜನಾ ಸಂಘದವರಿಂದ ಭಜನಾ ಸೇವೆ ನಡೆಯಲಿದೆ ಎಂದು ತಿಳಿಸಿದ್ದಾರೆ.