ಬೆಳಗಾವಿ: ಮುರಗೋಡ ಠಾಣಾ ವ್ಯಾಪ್ತಿಯಲ್ಲಿ 7ನೇ ತರಗತಿ ವಿದ್ಯಾಥಿನಿಯನ್ನು ಕಬ್ಬಿನ ಗದ್ದೆಗೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿರುವ ಅಮಾನವೀಯ ಘಟನೆ ನವೆಂಬರ್ 23 ರಂದು ನಡೆದಿದ್ದು, ಕುಟುಂಬಕ್ಕೆ ಜೀವ ಬೆದರಿಕೆ ನೀಡಿರುವ ಕಾರಣ ಪ್ರಕರಣ ಇದೀಗ ಮಾತ್ರ ಬೆಳಕಿಗೆ ಬಂದಿದೆ.
ಮುರಗೋಡ ಗ್ರಾಮಕ್ಕೆ ಸೇರಿದ ಬಾಲಕಿ ಮನೆಯಿಂದ ಸುಮಾರು 300 ಮೀಟರ್ ದೂರದಲ್ಲಿರುವ ಹಿಟ್ಟಿನ ಗಿರಣಿಗೆ ಹಿಟ್ಟು ರುಬ್ಬಿಸಲು ತೆರಳಿದ್ದ ವೇಳೆ, ಆರೋಪಿಗಳಾದ ಮಣಿಕಂಠ ದಿನ್ನಿಮಣಿ ಮತ್ತು ಈರಣ್ಣ ಸಂಕಮ್ಮನವರ ಆಕೆಯನ್ನು ಬಲವಂತವಾಗಿ ಕಬ್ಬಿನ ಗದ್ದೆಗೆ ಎಳೆದೊಯ್ದು ದೌರ್ಜನ್ಯ ಎಸಗಿದ್ದಾರೆ ಎಂದು ದೂರು ದಾಖಲಾಗಿದೆ.
ಘಟನೆ ಬಳಿಕ ಆರೋಪಿಗಳು ಕುಟುಂಬಕ್ಕೆ ಬೆದರಿಕೆ ಹಾಕಿದ್ದರಿಂದ, ಬಾಲಕಿ ಮತ್ತು ಕುಟುಂಬಸ್ಥರು ಭಯದಿಂದ ಯಾರಿಗೂ ವಿಷಯ ತಿಳಿಸಿರಲಿಲ್ಲ. ಬಳಿಕ ಧೈರ್ಯ ಮಾಡಿ ಡಿಸೆಂಬರ್ 1 ರಂದು ಮುರಗೋಡ ಠಾಣೆಯಲ್ಲಿ ಅಧಿಕೃತ ದೂರು ಸಲ್ಲಿಸಲಾಗಿದೆ. ಘಟನೆ ಸಂಬಂಧ ನಿನ್ನೆ ದೂರು ದಾಖಲಿಸಿಕೊಂಡಿರುವ ಮುರಗೋಡ ಠಾಣೆ ಪೊಲೀಸರು, ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಶೋಧ ಮುಂದುವರಿಸಿದ್ದಾರೆ.


