ಬೆಂಗಳೂರು: ದಿವಂಗತ ನಟ ದ್ವಾರಕೀಶ್ ಅವರ ಸೊಸೆ ದಾಖಲಿಸಿದ್ದ ಅಟ್ರಾಸಿಟಿ ಪ್ರಕರಣದ ತನಿಖೆಯಲ್ಲಿ ಭಾರೀ ಭ್ರಷ್ಟಾಚಾರದ ಆರೋಪ ಕೇಳಿಬಂದಿದ್ದು, ಪ್ರಕರಣದಿಂದ ಆರೋಪಿಗಳನ್ನು ಕೈಬಿಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಇಬ್ಬರು ಪೊಲೀಸ್ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಡಿಸಿಆರ್‌ಇ ವಿಭಾಗದ ಡಿವೈಎಸ್ಪಿ ಮಹೇಶ್ವರ ಗೌಡ ಹಾಗೂ ಪೊಲೀಸ್ ಕಾನ್ಸ್‌ಟೇಬಲ್ ಬಸವರಾಜ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಂದ ತಲಾ 50 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆಡಿಯೋ ಸಂಭಾಷಣೆ ತನಿಖೆಗೆ ಹೊಸ ತಿರುವು ನೀಡಿದೆ.
ಫೆಬ್ರವರಿ ತಿಂಗಳಲ್ಲಿ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಸುಕನ್ಯಾ ಹಾಗೂ ಅವರ ಕುಟುಂಬ ಮತ್ತು ಸ್ನೇಹಿತರು ಸೇರಿ 19 ಮಂದಿಯ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಾಗಿತ್ತು. ಬಳಿಕ ತನಿಖೆಯನ್ನು ಬೆಂಗಳೂರು ಡಿಸಿಆರ್‌ಇ ವಿಭಾಗಕ್ಕೆ ವರ್ಗಾಯಿಸಲಾಗಿತ್ತು.
ಆದರೆ ತನಿಖೆಯ ಮಧ್ಯೆ ಆರೋಪಿಗಳನ್ನು ಪ್ರಕರಣದಿಂದ ಕೈಬಿಡಲು ಒಟ್ಟು 19 ಆರೋಪಿಗಳಿಂದ 9.50 ಲಕ್ಷ ರೂಪಾಯಿ ಸಂಗ್ರಹಿಸಲು ಯತ್ನಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇದಕ್ಕೆ ಸಂಬಂಧಿಸಿದ ಆಡಿಯೋ ಸಂಭಾಷಣೆಯಲ್ಲಿ ಅಧಿಕಾರಿಗಳು ಮತ್ತು ಮಧ್ಯವರ್ತಿಗಳು ಹಣದ ವ್ಯವಹಾರದ ಬಗ್ಗೆ ಚರ್ಚಿಸಿರುವುದು ಬೆಳಕಿಗೆ ಬಂದಿದೆ.
ಆಡಿಯೋದಲ್ಲಿ ‘ಕೋರ್ಟ್‌ಗೆ ಹೋಗುವ ಅವಶ್ಯಕತೆ ಇಲ್ಲ, ಇಲ್ಲಿಯೇ ಮುಗಿಸಿಕೊಡುತ್ತೇವೆ’, ‘ಎಲ್ಲರೂ 35 ಸಾವಿರ ಕೊಡಿ’, ‘ಸಾಹೇಬರು ಒಪ್ಪಬೇಕು’ ಎಂಬ ಮಾತುಗಳು ಕೇಳಿಬಂದಿದ್ದು, ಪ್ರಕರಣವನ್ನು ಹಣದ ಮೂಲಕ ಮುಚ್ಚಿಹಾಕುವ ಯತ್ನ ನಡೆದಿತ್ತೆಂಬ ಅನುಮಾನ ಮೂಡಿಸಿದೆ.
ಆಡಿಯೋ ಸಾಕ್ಷ್ಯಾಧಾರಗಳ ಆಧಾರದಲ್ಲಿ ಲೋಕಾಯುಕ್ತ ಪೊಲೀಸರು ಡಿವೈಎಸ್ಪಿ ಮಹೇಶ್ವರ ಗೌಡ ಮತ್ತು ಕಾನ್ಸ್‌ಟೇಬಲ್ ಬಸವರಾಜ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಪ್ರಕರಣದ ಸಂಪೂರ್ಣ ತನಿಖೆ ಆರಂಭಿಸಿದ್ದಾರೆ. ಆರೋಪ ಸಾಬೀತಾದರೆ ಇಬ್ಬರು ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಎದುರಾಗುವ ಸಾಧ್ಯತೆ ಇದೆ.



