ಬೆಂಗಳೂರು: ಬೆಳಗ್ಗೆ ಹಾಲು ತರಲು ಅಂಗಡಿಗೆ ಹೋಗಿದ್ದ 9 ವರ್ಷದ ಬಾಲಕಿಗೆ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹೆಸರಘಟ್ಟದ ಬಳಿ ನಡೆದಿದೆ.

ನಾಲ್ಕನೇ ತರಗತಿಯಲ್ಲಿ ಓದುತ್ತಿರುವ ಮಧುಮಿತಾ ಗಾಯಗೊಂಡ ಬಾಲಕಿ. ಈಕೆ ತನ್ನ ತಾಯಿ ಮಂಜುಶ್ರೀ ಜೊತೆ ವಾಸವಾಗಿದ್ದಳು. ಎಂದಿನಂತೆ ಬೆಳಗ್ಗೆ 8 ಗಂಟೆ ಸುಮಾರಿಗೆ ಮನೆಯಿಂದ ಹಾಲು ತರಲು ಅಂಗಡಿಗೆ ತೆರಳಿದ್ದಳು. ಹಾಲು ಖರೀದಿಸಿ ಕೈಯಲ್ಲಿ ಹಿಡಿದುಕೊಂಡು ಮನೆಗೆ ವಾಪಸ್ ಬರುತ್ತಿದ್ದ ವೇಳೆ ರಸ್ತೆ ದಾಟಲು ಮುಂದಾಗಿದ್ದಾಳೆ.
ಈ ಸಂದರ್ಭದಲ್ಲಿ ವೇಗವಾಗಿ ಬಂದ ಬೈಕ್ ಏಕಾಏಕಿ ಬಾಲಕಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಾಲಕಿ ಹಾರಿ ರಸ್ತೆಗೆ ಬಿದ್ದಿದ್ದಾಳೆ. ಅಪಘಾತದ ಭಯಾನಕ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಬೈಕ್ ಡಿಕ್ಕಿಯಿಂದ ಮಧುಮಿತಾಳ ತಲೆಗೆ ಗಂಭೀರ ಗಾಯವಾಗಿದೆ. ತಕ್ಷಣ ಸ್ಥಳೀಯರು ಬಾಲಕಿಯನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಚಿಕಿತ್ಸೆ ಮುಂದುವರಿದಿದೆ.
ಘಟನೆ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಚಿಕ್ಕಬಾಣಾವರ ಸಂಚಾರಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.









