ವೈದ್ಯರ ಸಲಹೆಯಂತೆ ಆರೋಗ್ಯ ಕಾಪಾಡಿಕೊಳ್ಳಿ

0
9th National Aryuveda Day
Spread the love

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ಶಿವಾನಂದ ಸ್ವಾಮೀಜಿಗಳ ಸಲಹೆಯಂತೆ ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಸರಕಾರದ ಯಾವುದೇ ಅನುದಾನವಿಲ್ಲದೇ ಸೇವಾ ಮನೋಭಾವನೆಯಿಂದ ನಮ್ಮ ಸಂಸ್ಥೆಯಿಂದ ಉಚಿತ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಿ.ಜಿ.ಎಂ ಆಯುರ್ವೆದ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಎನ್. ಬೆಳವಡಿ ಹೇಳಿದರು.

Advertisement

ಇಲ್ಲಿಯ ಅನ್ನದಾನೀಶ್ವರ ಸಭಾ ಭವನದಲ್ಲಿ 9ನೇ ರಾಷ್ಟ್ರೀಯ ಆರ್ಯುವೇದ ದಿನಾಚರಣೆ ಅಂಗವಾಗಿ ಗದಗ ಡಿ.ಜಿ.ಎಂ. ಆಯುರ್ವೇದ ಮಹಾವಿದ್ಯಾಲಯವು ಗ್ರಾ.ಪಂ ಸಹಯೋಗದಲ್ಲಿ ಲಕ್ಕುಂಡಿಯನ್ನು ಆಯುರ್ವೇದ ದತ್ತು ಗ್ರಾಮವನ್ನಾಗಿ ಪಡೆದುಕೊಳ್ಳುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಆಯುರ್ವೇದಿಕ್ ಆಸ್ಪತ್ರೆಯ ತಜ್ಞ ವೈದ್ಯರು, ಉಪನ್ಯಾಸಕರು ಪ್ರತಿ ತಿಂಗಳು ಗ್ರಾಮದಲ್ಲಿ ಉಚಿತವಾಗಿ ಆರೋಗ್ಯ ಶಿಬಿರ, ಆರೋಗ್ಯ ಜಾಗೃತಿ, ಶಾಲಾ ಮಕ್ಕಳ ಆರೋಗ್ಯ ತಪಾಸಣೆ, ಉಪನ್ಯಾಸ ಕಾರ್ಯಕ್ರಮಗಳು ಸೇರಿದಂತೆ ಗ್ರಾಮದ ಜನರ ಆರೋಗ್ಯ ಸುಧಾರಣೆಗಾಗಿ ಬೇಕಾಗುವ ಹಲವಾರು ಕಾರ್ಯ ಚಟುವಟಕೆಗಳನ್ನು ನಡೆಸಲಿದ್ದಾರೆ. ಆದ್ದರಿಂದ ಗ್ರಾಮಸ್ಥರು ಸಹಾಯ, ಸಹಕಾರ ನೀಡಬೇಕು ಎಂದು ವಿನಂತಿಸಿಕೊಂಡರು.

ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿ ಡಾ. ಅಮೃತ ಹರಿದಾಸರ ಮಾತನಾಡಿ, ನಮ್ಮ ದೈನಂದಿನ ಚಟುವಟಿಕೆಯಿಂದ ನಮ್ಮ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಆದ್ದರಿಂದ ವೈದ್ಯರ ಸಲಹೆಯಂತೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಈ ದಿಸೆಯಲ್ಲಿ ಅವಶ್ಯವಿದ್ದರೆ ಮಾತ್ರ ಔಷಧವನ್ನು ತೆಗೆದುಕೊಳ್ಳಬೇಕು.

ಔಷಧವನ್ನು ಹಾಕುವವರು ವೈದ್ಯರಲ್ಲ. ಔಷಧವನ್ನು ಬಿಡಿಸುವವರು ವೈದ್ಯರು. ಆಯುರ್ವೇದ ಔಷಧವು ರೋಗವನ್ನು ಬೇರು ಸಮೇತವಾಗಿ ಕಿತ್ತು ಹಾಕುವ ಪದ್ಧತಿಯಾಗಿದ್ದು, ವೈದ್ಯರ ಸಲಹೆಯಂತೆ ತೆಗೆದುಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ ಅಧ್ಯಕ್ಷ ಕೆ.ಎಸ್. ಪೂಜಾರ ಮಾತನಾಡಿ, ಸರಕಾರ ಜನರ ಆರೋಗ್ಯ ರಕ್ಷಣೆಗಾಗಿ ಹತ್ತು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರ ಸಹಾಯದೊಂದಿಗೆ ಮನೆ ಮನೆಗೆ ತೆರಳಿ ಆರೋಗ್ಯ ವಿಚಾರಣೆ ಮಾಡುತ್ತಿದೆ. ಇದನ್ನು ಮೀರಿ ಡಿ.ಜಿ.ಎಂ. ಆಯುರ್ವೇದ ಆಸ್ಪತ್ರೆ ತಜ್ಞ ವೈದ್ಯರು ನಮ್ಮ ಗ್ರಾಮವನ್ನು ದತ್ತು ಪಡೆದು ಜನರ ಆರೋಗ್ಯ ರಕ್ಷಣೆಗೆ ಹಲವು ಕಾರ್ಯಕ್ರಮಗಳನ್ನು ರೂಪಿಸಿಕೊಂಡಿದ್ದಾರೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.

ಡಾ. ಶಶಿಧರ ಎಮ್ಮಿ, ಡಾ. ಕುಮಾರ ಕಂಠಿಮಠ, ಡಾ. ಎಂ.ವಿ. ಸೋಗಿನ, ಡಾ. ವೀಣಾ ಕೋರಿ, ಡಾ. ಮಮತಾ ಕಟಾದಕರ್, ಡಾ. ಅಶ್ವಿನಿ ಹೊಸಗನ್ನವರ, ಪಿ.ಡಿ.ಒ ರಾಜಕುಮಾರ ಭಜಂತ್ರಿ, ಗ್ರಾ.ಪಂ ಸರ್ವ ಸದಸ್ಯರು ವೇದಿಕೆಯಲ್ಲಿದ್ದರು. ಕವಿತಾ ಬಡಿಗೇರ ಪ್ರಾರ್ಥಿಸಿದರು. ಆಯುರ್ವೆದ ಕಾಲೇಜ್ ವಿದ್ಯಾರ್ಥಿನಿಯರು ದನ್ವಂತರಿ ಸ್ತವನ ಹೇಳಿದರು. ತುಕಾರಾಮ ಹುಲಗಣ್ಣವರ ನಿರೂಪಿಸಿದರು. ಡಾ. ಸುವರ್ಣ ನಿಡಗುಂದಿ ವಂದಿಸಿದರು.

9ನೇ ರಾಷ್ಟ್ರೀಯ ಆರ್ಯುವೇದ ದಿನಾಚರಣೆ ಅಂಗವಾಗಿ ಗದಗ ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಶಿಬಿರ, ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಗದಗ ಜಿಲ್ಲೆಯಲ್ಲಿ ಲಕ್ಕುಂಡಿ, ಹೊಂಬಳ, ಲಿಂಗದಾಳ, ಮಲ್ಲಸಮುದ್ರ, ನಾಗಾವಿ ಗ್ರಾಮಗಳನ್ನು ಡಿ.ಜಿ.ಎಂ ಆಯುರ್ವೆದ ಕಾಲೇಜು ದತ್ತು ಪಡೆದುಕೊಡು ಜನರ ಆರೋಗ್ಯ ಸುಧಾರಣೆಗಾಗಿ ಸಾಮಾಜಿಕ ಸೇವೆಯನ್ನು ಮಾಡುತ್ತಿದೆ.
– ಭೂದೇಶ ಕನಾಜ.
ತಜ್ಞ ವೈದ್ಯರು.


Spread the love

LEAVE A REPLY

Please enter your comment!
Please enter your name here