ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಸಂಸ್ಥೆಗಳಿಗೆ ದಾನಿಗಳೇ ಜೀವಾಳ. ಅವರ ದಿನಾಚರಣೆಯನ್ನು, ಸ್ಮರಣೋತ್ಸವವನ್ನು ಸಂಸ್ಥೆಗಳೇ ಆಚರಿಸಬೇಕು. ಅಂದಾಗ ಮಾತ್ರ ಅದಕ್ಕೊಂದು ಅರ್ಥ, ದಾನಿಗಳಿಗೊಂದು ಗೌರವ ದೊರಕುತ್ತದೆ. ಮುಂದಿನ ವರ್ಷದಿಂದ ಪಾರ್ವತಮ್ಮ ಮೆಣಸಗಿಯವರ ಪುಣ್ಯ ಸ್ಮರಣೋತ್ಸವವನ್ನು ಸಂಸ್ಥೆಯಿಂದಲೇ ಆಚರಿಸುವ ಸಿದ್ಧತೆಯನ್ನು ಮಾಡಿಕೊಳ್ಳಬೇಕೆಂದು ಸಂಸ್ಥೆಯ ಕಾರ್ಯಕರ್ತರಿಗೆ ಹಾಲಕೆರೆಯ ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠದ ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳವರು ಹೇಳಿದರು.
ಪಟ್ಟಣದ ಶ್ರೀ ಅನ್ನದಾನೇಶ್ವರ ಸಭಾ ಮಂಟಪದಲ್ಲಿ ಸೋಮವಾರ ಜರುಗಿದ ದಾನಿ ಶ್ರೀಮತಿ ಪಾರ್ವತಮ್ಮ ಮೆಣಸಿಗಿಯವರ 11ನೇ ಪುಣ್ಯ ಸ್ಮರಣೋತ್ಸವದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ತಾಯಿಗೆ ತಕ್ಕ ಮಗ ಎಂದರೆ ಮಲ್ಲಿಕಾರ್ಜುನಪ್ಪನವರು. ಅವರು ಎಲ್ಲಿಯೇ ದಾನ ನೀಡಿದರೂ ಪಾರ್ವತಮ್ಮನವರು ಎಂದಿಗೂ ಅವರನ್ನು ಆಕ್ಷೇಪಿಸಲಿಲ್ಲ. ಸೇವಾ ನಿವೃತ್ತಿಯ ನಂತರ ತಮಗೆ ಬಂದ ಎಲ್ಲ ಹಣವನ್ನೂ ಕಿಂಚಿತ್ತೂ ಯೋಚನೆ ಮಾಡದೆ ಶ್ರೀಮಠಕ್ಕೆ ಅರ್ಪಣೆ ಮಾಡಿದವರು ಅವರು.
ತಮ್ಮದೆಂಬುವುದನ್ನು ಏನನ್ನೂ ಉಳಿಸಿಕೊಳ್ಳದೆ ಎಲ್ಲವನ್ನೂ ಶ್ರೀಮಠಕ್ಕೆ ಧಾರೆ ಎರೆದಿರುವ ಮಲ್ಲಿಕಾರ್ಜುನಪ್ಪನವರು ದಾನಿಗಳಿಗೊಂದು ಮಾದರಿಯಾಗಿದ್ದಾರೆ ಎಂದು ಶ್ರೀಗಳು ಕೊಂಡಾಡಿದರು.
ತಮ್ಮ ತಾಯಿಯ ಸ್ಮರಣಾರ್ಥವಾಗಿ ಮಲ್ಲಿಕಾರ್ಜುನಪ್ಪ ಮೆಣಸಗಿಯವರು ಶ್ರೀ ಅನ್ನದಾನೇಶ್ವರ ಶಿಕ್ಷಣ ಸಂಸ್ಥೆಯ ಎಲ್ಲ ಅಂಗ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಧನ ರೂಪದ ಪ್ರತಿಭಾ ಪುರಸ್ಕಾರ ನೀಡಿದರು. ಹಾಗೆಯೇ ಎಲ್ಲ ಅಂಗ ಸಂಸ್ಥೆಗಳಲ್ಲಿ ಬಿಸಿಯೂಟ ಮಾಡುವ ಎಲ್ಲ ಸಿಬ್ಬಂದಿಯವರಿಗೆ ಬಟ್ಟೆಗಳನ್ನು ವಿತರಿಸಿದರು.
ಸಮಾರಂಭದಲ್ಲಿ ಅನೇಕ ಗಣ್ಯರನ್ನು, ಶಿಕ್ಷಕರನ್ನು, ಪತ್ರಕರ್ತರನ್ನು, ತಮ್ಮ ನೌಕರಿಗಾಗಿ ಆಗ ನೂರು ರೂಪಾಯಿ ಕೊಟ್ಟು ಹರಸಿದ ಶಾರಾಬಿ ಬಾಬಣ್ಣವರ ಅವರ ಮಗಳು ರಾಜಮ್ಮ ಬಾಬಣ್ಣವರ ಮತ್ತು ಅನ್ನಪೂರ್ಣಮ್ಮ ಶಿರ್ಸಿ ಅವರನ್ನು ಸನ್ಮಾನಿಸುವ ಮೂಲಕ ಮಲ್ಲಿಕಾರ್ಜುನಪ್ಪ ಮೆಣಸಗಿಯವರು ಇತರರಿಗೆ ಮೇಲ್ಪಂಕ್ತಿ ಹಾಕಿಕೊಟ್ಟರು ಎಂದರು.
ಎಂ.ಕೆ. ಗುರುಸಿದ್ಧೇಶ್ವರ ಶಾಸ್ತಿçಗಳು ಪ್ರಾಸ್ತಾವಿಕವಾಗಿ ಮಾತನಾಡಿ, ಮಲ್ಲಿಕಾರ್ಜುನಪ್ಪ ಮೆಣಸಿಗಿಯವರ ಮತ್ತು ಅವರ ತಾಯಿ ಪಾರ್ವತಮ್ಮನವರ ವ್ಯಕ್ತಿತ್ವದ ಪರಿಚಯ ಮಾಡಿಕೊಟ್ಟರು. ಕೊಟ್ಟೂರಿನ ದರೂರು ಶ್ರೀಗಳವರು ಸಮಾರಂಭದ ಸಮ್ಮುಖವನ್ನು ವಹಿಸಿದ್ದರು. ವೇದಿಕೆಯ ಮೇಲೆ ನಿವೃತ್ತ ಪ್ರಾಚಾರ್ಯ ಸಿ.ಐ. ಮರಡಿಮಠ, ಆಡಳಿತಾಧಿಕಾರಿ ಎನ್.ಆರ್. ಗೌಡರ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಬಸವರಾಜ ವೀರಾಪೂರ, ಅಬ್ಬಿಗೇರಿಯ ಡಾ. ಆರ್.ಬಿ. ಬಸವರಡ್ಡೇರ, ನಿವೃತ್ತ ಶಿಕ್ಷಕ ಕಮತರ, ಆಡಳಿತ ಮಂಡಳಿ ಸದಸ್ಯ ತಳಬಾಳ, ದಾನಿ ಮಲ್ಲಿಕಾರ್ಜುನಪ್ಪ ಮೆಣಸಿಗಿ ಇನ್ನೂ ಮುಂತಾದವರಿದ್ದರು.
ಸಮಾರಂಭದಲ್ಲಿ ಮೆಣಸಿಗಿ ಕುಟುಂಬದ ಬಂಧು ಬಾಂಧವರು ಪಾಲ್ಗೊಂಡಿದ್ದರು. ಮುಖ್ಯ ಶಿಕ್ಷಕ ಸಂಗಮೇಶ ಹೂಲಗೇರಿ ಸ್ವಾಗತಿಸಿದರು.ಶಿಕ್ಷಕ ಐ.ಬಿ. ಹೊಟ್ಟಿನ ನಿರೂಪಿಸಿದರು.
ಕಣ್ಣಿಗೆ ಕಾಣದ ದೇವರನ್ನು ಹುಡುಕುತ್ತ ಹೋಗಿ ಸಹಸ್ರಾರು ರೂಪಾಯಿಗಳನ್ನು ಕಳೆದುಕೊಳ್ಳುತ್ತಿರುವ ಇಂದಿನ ಜನರು ಮನೆಯಲ್ಲಿಯೇ ಇರುವ ಭಗವಂತ ಸ್ವರೂಪಿ ತಂದೆ-ತಾಯಿಗಳನ್ನು ಪೂಜಿಸಿದರೆ ಸಾಕು ಅವರಿಗೆ ಭಗವಂತನ ದರ್ಶನದ ಪುಣ್ಯಭಾಗ್ಯ ಲಭಿಸುತ್ತದೆ. ಮಲ್ಲಿಕಾರ್ಜುನಪ್ಪನವರ ಸಮಾಜಮುಖಿ ಸೇವೆಯನ್ನು ಎಲ್ಲರೂ ಗಮನಿಸಿ, ಅವರನ್ನು ಅನುಕರಿಸಬೇಕು. ಮುಂದಿನ ದಿನಗಳಲ್ಲಿ ನಮ್ಮ ಸಂಸ್ಥೆಯ ಬಾಲಿಕೆಯರ ಪ್ರೌಢಶಾಲೆಯ ಕಟ್ಟಡವನ್ನು ನಿರ್ಮಿಸಲು ಉದ್ದೇಶಿಸಿದ್ದು, ಅದಕ್ಕೆ ದಾನಿ ಪಾರ್ವತಮ್ಮ ಮೆಣಸಗಿಯವರ ಹೆಸರನ್ನೇ ಇರಿಸಲಾಗುವದೆಂದು ಶ್ರೀಗಳು ಘೋಷಿಸಿದರು.