ವಿಜಯಸಾಕ್ಷಿ ಸುದ್ದಿ, ಗದಗ : ಪ್ರಧಾನಿ ನರೇಂದ್ರ ಮೋದಿ ಕಳೆದ 10 ವರ್ಷಗಳಲ್ಲಿ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿದ 9 ಯೋಜನೆಗಳ ಪೈಕಿ 8 ಯೋಜನೆಗಳಿಗೆ ಅನುದಾನ ನೀಡದೆ ಕರ್ನಾಟಕ ಪ್ರವಾಸೋದ್ಯಮ ಕ್ಷೇತ್ರದಕ್ಕೆ ಬಹುದೊಡ್ಡ ದ್ರೋಹ ಮಾಡಿದ್ದಾರೆ ಎಂದು ಕಾನೂನು ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ. ಪಾಟೀಲ ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಪ್ರಧಾನಿ ಮೋದಿ ಚುನಾವಣೆ ಪ್ರಚಾರಕ್ಕೆ ಬಂದ ಸಂದರ್ಭದಲ್ಲಿ ಮೈಸೂರು, ಬಾದಾಮಿ ಹಾಗೂ ಹಂಪಿ ಕ್ಷೇತ್ರಗಳನ್ನು ಜಾಗತಿಕ ಪ್ರವಾಸಿ ತಾಣವಾಗಿಸುವದಾಗಿ ಹೇಳಿಕೆ ನೀಡಿದ್ದಾರೆ. ಆದರೆ ಈಗಾಗಲೇ ಅವು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಅವುಗಳ ಅಭಿವೃದ್ಧಿಗೆ ಇನ್ನಷ್ಟು ಒತ್ತು ಸಿಗಬೇಕಾಗಿರುವುದು ನಿಜವಾದರೂ, 10 ವರ್ಷಗಳಲ್ಲಿ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿಯನ್ನು ನಿರ್ಲಕ್ಷಿಸಿ, ಈಗ ಅದರ ಅಭಿವೃದ್ಧಿ ಬಗ್ಗೆ ಮಾತಾಡುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಬಿಜೆಪಿ ಸಂಸದರು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.
ಸಂವಿಧಾನದ ಪ್ರತಿಯನ್ನು ಸುಟ್ಟು ಹಾಕಿದರೂ ಪ್ರಧಾನಿ ನರೇಂದ್ರ ಮೋದಿ ಮೌನವಾಗಿಯೇ ಕುಳಿತಿದ್ದರು.
ಸುಪ್ರೀಮ್ ಕೋರ್ಟಿನ ಐವರು ನ್ಯಾಯಾಧೀಶರು ರಸ್ತೆ ಮೇಲೆ ಕುಳಿತು ಪತ್ರಿಕಾಗೋಷ್ಠಿ ನಡೆಸುವಂತಾಯಿತು. ಇಂಥ ಹತ್ತು ಹಲವಾರು ಸಂವಿಧಾನ ವಿರೋಧಿ ಕೃತ್ಯಗಳು ಬಿಜೆಪಿ ಅವಧಿಯಲ್ಲಿ ನಡೆದಿದೆ. ಆದರೆ ಈಗ ಅಂಬೇಡ್ಕರ್ ಮತ್ತೆ ಹುಟ್ಟಿ ಬಂದರೂ ಸಂವಿಧಾನ ಬದಲಾಯಿಸಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಏಕಾಏಕಿ ಬಿಜೆಪಿ ನಾಯಕರಿಗೆ ಸಂವಿಧಾನದ ಮೇಲೆ ಪ್ರೀತಿ ಹುಟ್ಟಿಕೊಂಡಿದ್ದು ಏಕೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕರಾದ ಜಿ.ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಕಾಂಗ್ರೆಸ್ ಮುಖಂಡರಾದ ಬಿ.ಬಿ. ಅಸೂಟಿ, ಗುರುನಾಥ ದಾನಪ್ಪನವರ, ಸುಜಾತಾ ದೊಡ್ಡಮನಿ ಇತರರು ಉಪಸ್ಥಿತರಿದ್ದರು.
ಎಚ್ಡಿಕೆ ಮಹಿಳೆಯರ ಕ್ಷಮೆ ಕೇಳಲಿ
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಹಿಳೆಯರ ಬಗ್ಗೆ ಅಪಹಾಸ್ಯ, ಅಗೌರವ ತರುವಂಥ ಹೇಳಿಕೆ ನೀಡಿರುವುದು ಅವಮಾನಕರ ಸಂಗತಿ. 3 ಕೋಟಿ ಮಹಿಳೆಯರು ಗ್ಯಾರಂಟಿ ಯೋಜನೆಗಳ ಲಾಭ ಪಡೆದಿದ್ದಾರೆ. ಸ್ವಾವಲಂಬಿ, ಸ್ವಾಭಿಮಾನದ ಬದುಕು ಕಂಡುಕೊಂಡಿದ್ದಾರೆ. ಅಂಥವರಿಗೆ ಮುಖಂಡರೊಬ್ಬರು ಅಗೌರವ ಉಂಟು ಮಾಡಿರುವುದು ಸರಿಯಲ್ಲ. ಈ ಕೂಡಲೇ ಕುಮಾರಸ್ವಾಮಿ ಅವರು ರಾಜ್ಯದ ಮಹಿಳೆಯರ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ರಾಜಕೀಯವಾಗಿ ಅಂತ್ಯ ಕಾಣಬೇಕಾಗುತ್ತದೆ.
– ಎಚ್.ಕೆ. ಪಾಟೀಲ.
ಕಾನೂನು, ಪ್ರವಾಸೋದ್ಯಮ ಸಚಿವರು.
ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಮಾತ್ರವಲ್ಲ, ಬಿಜೆಪಿ ಸರಕಾರದ ಅವಧಿಯಲ್ಲೂ ಕರ್ನಾಟಕ ಪ್ರವಾಸೋದ್ಯಮವನ್ನು ನಿರ್ಲಕ್ಷಿಸಿದ್ದಾರೆ. ಕರಾವಳಿ ಅಭಿವೃದ್ಧಿಗೆ 95 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಕೇವಲ 19 ಕೋಟಿ ರೂ. ಬಿಡುಗಡೆ ಮಾಡಿ ಆ ಯೋಜನೆಯನ್ನೇ ಸ್ಥಗಿತಗೊಳಿಸಿದರು. ಗೋಲ್ಡನ್ ಚಾರಿಯಟ್ ರೈಲು ಸೇವೆಯನ್ನೂ ನಿಲ್ಲಿಸಿದರು ಎಂದು ಸಚಿವ ಎಚ್.ಕೆ. ಪಾಟೀಲ ಆರೋಪಿಸಿದರು.