ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ಇಲ್ಲಿಯ ಐತಿಹಾಸಿಕ ಕೋಟೆ ವೀರಭದ್ರೇಶ್ವರ ರಥೋತ್ಸವವು ಎಪ್ರಿಲ್ 20ರ ಸಂಜೆ ಸಂಭ್ರಮದಿಂದ ಜರುಗಲಿದೆ. 46ನೇ ವರ್ಷದ ರಥೋತ್ಸವಕ್ಕೆ ಸಂಜೆ 4 ಗಂಟೆಗೆ ಡೋಣಿ ನಂದಿವೇರಿಮಠದ ಶಿವಕುಮಾರ ಸ್ವಾಮೀಜಿಗಳು, ಹರ್ಲಾಪೂರ ಡಾ. ಕೊಟ್ಟೂರೇಶ್ವರ ಶ್ರೀಗಳು, ಲಕ್ಕುಂಡಿ ಅಲ್ಲಮಪ್ರಭುದೇವರ ಮಠದ ಸಿದ್ಧಲಿಂಗೇಶ್ವರ ಶ್ರೀಗಳು ಚಾಲನೆ ನೀಡುವರು.
ರಥೋತ್ಸವದಲ್ಲಿ ನಂದಿಕೋಲ ಮೇಳ, ಡೊಳ್ಳು ಮೇಳ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಭಾಗವಹಿಸುವವು. ಇದಕ್ಕೂ ಪೂರ್ವ ಮುಂಜಾನೆ 10ರಿಂದ 1ರವರೆಗೆ ಉಚಿತ ಆರೋಗ್ಯ ತಪಾಸಣೆ, ಚರ್ಮರೋಗ ತಪಾಸಣೆ, ಹೃದಯ ರೋಗ ತಪಾಸಣೆ ಹಾಗೂ ಉಚಿತ ರಕ್ತದಾನ ಶಿಬಿರ ಜರುಗಲಿದೆ.
ಏ.21ರಂದು ಗುಗ್ಗಳೋತ್ಸವ ಕಾರ್ಯಕ್ರಮ ನಡೆಯಲಿದ್ದು, ಪ್ಯಾಟಿ ಹನುಮಂತ ದೇವರ ದೇವಸ್ಥಾನದಿಂದ ಆರಂಭವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ನಂತರ ದೇವಸ್ಥಾನದ ಮುಂದೆ ಅಗ್ನಿ ಕುಂಡದಲ್ಲಿ ಹಾಯುವ ಕಾರ್ಯಕ್ರಮ ಜರುಗಲಿದೆ. ಸಂಜೆ 5ಕ್ಕೆ ಪಲ್ಲಕ್ಕಿ ಉತ್ಸವ ಜರುಗಲಿದ್ದು, ರಥೋತ್ಸವದ ಅಂಗವಾಗಿ ಪ್ರತಿದಿನ ಪ್ರಾತಃಕಾಲ ರುದ್ರಾಭಿಷೇಕ ಜರುಗಲಿದೆ ಎಂದು ಜಾತ್ರಾ ಸೇವಾ ಸಮಿತಿಯ ಪ್ರಕಟಣೆ ತಿಳಿಸಿದೆ.