ಮುನಿಯನ ತಾಂಡಾ ಹತ್ತಿರದ ಫಲಭರಿತ ತೋಟ ಬೆಂಕಿಗಾಹುತಿ

0
fire
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಪ್ರಗತಿಪರ ರೈತ ಚನ್ನಬಸಪ್ಪ ಜಗಲಿ ಅವರಿಗೆ ಸೇರಿದ ಮುನಿಯನ ತಾಂಡಾ ಹತ್ತಿರದ ತೋಟಕ್ಕೆ ಶನಿವಾರ ಶಾರ್ಟ್ ಸರ್ಕ್ಯೂಟ್‌ನಿಂದ ಹೊತ್ತಿಕೊಂಡ ಬೆಂಕಿಯಿಂದ ಫಲಭರಿತ 50ಕ್ಕೂ ಹೆಚ್ಚು ತೆಂಗಿನ ಮರ, 120ಕ್ಕೂ ಹೆಚ್ಚು ನೇರಳೆ, 20 ಮಾವು ಮತ್ತಿತರರ ಗಿಡಗಳು ಮತ್ತು ನೀರಾವರಿ ಉಪಕರಣಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿವೆ. ಸುಮಾರು 4.50 ಲಕ್ಷ ರೂ ಮೊತ್ತದ ಗಿಡ-ಮರ ಮತ್ತು ನೀರಾವರಿ ಉಪಕರಣಗಳು ಸುಟ್ಟಿರುವ ಬಗ್ಗೆ ಅಗ್ನಿಶಾಮಕ ಅಧಿಕಾರಿ ತಿಳಿಸಿದ್ದಾರೆ.

Advertisement

ಅತಿಯಾದ ಬಿಸಿಲಿಂದ ತೋಟದಲ್ಲಿನ ಒಣ ಹುಲ್ಲಿಗೆ ಹೊತ್ತಿದ ಕಿಡಿಯಿಂದ ಆವರಿಸಿದ ಬೆಂಕಿ ತೋಟವನ್ನಾವರಿಸಿದೆ. ತೋಟದಲ್ಲಿಯೇ ಇದ್ದ ಕೂಲಿಯಾಳುಗಳು ಬೋರ್‌ವೆಲ್ ನೀರಿನಿಂದ ಬೆಂಕಿ ಆರಿಸಲು ಹೆಣಗಾಡಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹರಸಾಹಸಪಟ್ಟು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಟ್ಟು 36 ಎಕರೆ ತೋಟದಲ್ಲಿ ತೆಂಗು, ತೇಗ, ಮಾವು ಸೇರಿದಂತೆ ಹತ್ತಾರು ಜಾತಿಯ ಸಾವಿರಾರು ಮರಗಳಿದ್ದು, 2 ಎಕರೆ ತೋಟಕ್ಕೆ ಮಾತ್ರ ಬೆಂಕಿ ಆವರಿಸಿ ಹೆಚ್ಚಿನ ಹಾನಿ ತಪ್ಪಿದಂತಾಗಿದೆ.

ಅಗ್ನಿಶಾಮಕ ಠಾಣಾಧಿಕಾರಿ ಎಸ್.ವೈ. ಪಾಟೀಲ ಅವರು ಸಿಬ್ಬಂದಿಗಳಾದ ಅಶೋಕ ನೆರ್ತಿ, ಫಕ್ಕೀರಪ್ಪ ಶಿರಹಟ್ಟಿ, ಯಮನಪ್ಪ ಕರೀಕಟ್ಟಿ, ಮಂಜು ಹಡಪದ, ಎ.ಬಿ ಖಾದಿ ಅವರ ಸಹಕಾರದೊಂದಿಗೆ ಬೆಂಕಿ ನಂದಿಸುವ ಕಾರ್ಯ ಕೈಗೊಂಡರು. ಇದಕ್ಕೆ ಸುತ್ತಮುತ್ತಲಿನ ರೈತರು ಸಹಕಾರ ನೀಡಿದರು.

ಜಿಲ್ಲೆಯಲ್ಲಿಯೇ ಮಾದರಿ ತೋಟ

ತೋಟದಲ್ಲಿ 1800 ತೆಂಗು, 1500 ನೇರಳೆ, ನೂರಾರು ತೇಗ, ಹಲಸು, ಮಾವು ಬೆಳೆದಿರುವ ಇವರ 36 ಎಕರೆ ತೋಟದಲ್ಲಿನ 11 ಬೋರ್‌ವೆಲ್‌ಗಳು ಬರದಿಂದ ಬತ್ತಿಹೋಗಿವೆ. ಲಕ್ಷಾಂತರ ರೂ ಖರ್ಚು ಮಾಡಿ ಬೆಳೆದಿರುವ ಗಿಡ-ಮರಗಳನ್ನು ಮಳೆಗಾಲದವರೆಗೆ ಉಳಿಸಿಕೊಳ್ಳಲೇಬೇಕು ಎಂದು ರೈತ ಚನ್ನಪ್ಪ ಜಗಲಿ ಕಳೆದ ಮರ‍್ನಾಲ್ಕು ತಿಂಗಳಿಂದ ಪರದಾಡುತ್ತಿದ್ದಾರೆ. ದಿನವೂ ಟ್ಯಾಂಕರ್ ಬಾಡಿಗೆ ಪಡೆದು ಸಮೀಪದ ದೊಡ್ಡೂರ, ಉಂಡೇನಹಳ್ಳಿಯ ಬೇರೆ ರೈತರಿಂದ ಟ್ಯಾಂಕರ್ ನೀರು ತಂದು ತೋಟ ಉಳಿಸಿಕೊಳ್ಳುವ ಸಾಹಸ ಮಾಡುತ್ತಿದ್ದಾರೆ. ಇದೀಗ ಬರ ಸಿಡಿಲು ಬಡಿದಂತೆ ಬೆಂಕಿಯ ಹೊಡೆತಕ್ಕೆ ಲಕ್ಷಾಂತರ ರೂ ಬೆಲೆ ಬಾಳುವ ಗಿಡ ಮರಗಳು ಬೆಂಕಿಗೆ ಬಲಿಯಾಗಿರುವುದು ರೈತನನ್ನು ಸಂಕಷ್ಟಕ್ಕೀಡುಮಾಡಿದೆ. ಹಾನಿಗೊಳಗಾದ ರೈತನಿಗೆ ಸರಕಾರ ಪರಿಹಾರ ಕಲ್ಪಿಸಬೇಕು ಎಂದು ರೈತ ವಿರೂಪಾಕ್ಷ ಆದಿ ಒತ್ತಾಯಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here