ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಲೋಕಸಭಾ ಚುನಾವಣೆಯಲ್ಲಿ ಮತದಾರರು ಮುಕ್ತವಾಗಿ, ನಿರ್ಭೀತಿಯಿಂದ ಮತದಾನ ಮಾಡಲು ಮತ್ತು ಚುನಾವಣೆ ವೇಳೆ ಶಾಂತಿ-ಸುವ್ಯವಸ್ಥೆ ಕಾಪಾಡುವ ಹಿತ ದೃಷ್ಟಿಯಿಂದ ಬುಧವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪೊಲೀಸ್ ಸಿಬ್ಬಂದಿಗಳಿಂದ ರೂಟ್ ಮಾರ್ಚ್ ನಡೆಯಿತು.
ರೂಟ್ ಮಾರ್ಚ್ ಪಟ್ಟಣದ ಹಳೆ ಪೊಲೀಸ್ ಠಾಣೆಯಿಂದ ಪ್ರಾರಂಭಗೊಂಡು ಬ್ರಹ್ಮದೇವರ ಸರ್ಕಲ್, ಹಾವಳಿ ಆಂಜನೇಯ ದೇವಸ್ಥಾನ ಮೂಲಕ ಬಜಾರ್ ಮುಖ್ಯ ರಸ್ತೆ ಪುರಸಭೆ ಶಿಗ್ಲಿ ನಾಕಾ ಮುಖಾಂತರ ಹಾಯ್ದು ಬಸ್ ಸ್ಟಾಂಡ್ ಮುಖಾಂತರ ಹೊಸ ಪೊಲೀಸ್ ಠಾಣೆಗೆ ತಲುಪಿ ಮುಕ್ತಾಯಗೊಂಡಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ.ಬಿ. ಸಂಕದ, ಮತದಾನದ ದಿನ ಪ್ರತಿಯೊಬ್ಬರೂ ಮನೆಯಿಂದ ಹೊರಗಡೆ ಬಂದು ನಿರ್ಭೀತಿಯಿಂದ ಮತದಾನ ಮಾಡಬೇಕು.
ಪ್ರಜಾಪ್ರಭುತ್ವದಲ್ಲಿ ಪ್ರತಿಯೊಂದು ಮತವೂ ಮಹತ್ವದ್ದಾಗಿದ್ದು, ಮತದಾನ ಒಂದು ಮಹತ್ವದ ಕಾರ್ಯವಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಹಾಗೂ ಕಾನೂನು-ಸುವ್ಯವಸ್ಥೆ ಕಾಪಾಡುವ ಸಲುವಾಗಿ ಪೊಲೀಸರೊಂದಿಗೆ ಸಹಕರಿಸಬೇಕು. ಅಹಿತಕರ ಘಟನೆಯಲ್ಲಿ ಬಾಗಿಯಾದರೆ ಅಂತವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು. ಕಾನೂನು-ಸುವ್ಯವಸ್ಥೆಗೆ ಸಮಸ್ಯೆಯಾಗದಂತೆ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದ ಅವರು, ಮತದಾರರಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವುದು ಇದರ ಉದ್ದೇಶವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಡಿಎಸ್‌ಪಿ ಜೆ.ಎಚ್. ಇನಾಮದಾರ, ಶಸಸ್ತ್ರ ಪೊಲೀಸ್ ಇನ್ಸ್ಪೆಕ್ಟರ್ ಎಸ್.ಬಿ. ಚೌದರಿ, ಪಿಎಸ್‌ಐ ಈರಪ್ಪ ರಿತ್ತಿ, ತಾ.ಪಂ ಇಓ ಕೃಷ್ಣಪ್ಪ ಧರ್ಮರ, ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ, ಲಕ್ಷ್ಮೇಶ್ವರ ಪೊಲೀಸ್ ಸಿಬ್ಬಂದಿಗಳು ಹಾಗೂ ಕೇರಳ ರಿಸರ್ವ್ ಪೊಲೀಸ್ ಸಿಬ್ಬಂದಿಗಳು ಇದ್ದರು.