ಬೆಂಗಳೂರು:- ಕಾಂಗ್ರೆಸ್ ಸರ್ಕಾರದ ಅಧಿಕಾರದ ಕುರ್ಚಿ ಕಿತ್ತಾಟ ಬೀದಿಗೆ ಬಂದಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ. ಸ್ಟೇಡಿಯಂನಲ್ಲಿ ನಡೆದ ಘಟನೆಗೂ ನನಗೂ ಸಂಬಂಧವಿಲ್ಲ ಎಂಬ ಸಿಎಂ ಹೇಳಿಕೆಗೆ ತಿರುಗೇಟು ಕೊಟ್ಟಿರುವ ಅಶೋಕ್, ಡಿ.ಕೆ.ಶಿವಕುಮಾರ್ ಸರ್ಕಾರದ ಭಾಗವಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.
ವಿಧಾನಸೌಧವನ್ನು ಸಿಎಂ ಸಿದ್ದರಾಮಯ್ಯ, ಸ್ಟೇಡಿಯಂ ಅನ್ನು ಡಿಕೆ ಶಿವಕುಮಾರ್ ಹಂಚಿಕೊಂಡಂತೆ ಕಾಣುತ್ತಿದೆ. ಏಕೆಂದರೆ ಸ್ಟೇಡಿಯಂ ಘಟನೆ ಡಿಕೆ ಶಿವಕುಮಾರ್ ತಲೆಗೆ ಕಟ್ಟಲು ಸಿಎಂ ಪ್ಲ್ಯಾನ್ ಮಾಡುತ್ತಿದ್ದರೆ, ಇತ್ತ ವಿಧಾನಸೌಧ ವಿಚಾರವನ್ನು ಸಿಎಂ ತಲೆಗೆ ಕಟ್ಟಲು ಡಿಸಿಎಂ ಪ್ಲ್ಯಾನ್ ಇದೆ. ಡಿಕೆ ಶಿವಕುಮಾರ್ ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗಿದ್ದರು. ಇವರಲ್ಲಿರುವ ಅಧಿಕಾರದ ಜಗಳ, ಕುರ್ಚಿ ಕಿತ್ತಾಟ ಬೀದಿಗೆ ಬಂದಿದೆ. ಈ ಘಟನೆಯಿಂದ ಸರ್ಕಾರ ಸಿಲುಕಿಕೊಂಡಿದೆ, ಹೊರ ಬರಲು ಆಗುತ್ತಿಲ್ಲ. ಹೀಗಾಗಿ ಸ್ಟೇಡಿಯಂಗೂ ನನಗೂ ಸಂಬಂಧವಿಲ್ಲ ಎಂದು ಹೇಳುತ್ತಿದ್ದಾರೆ ಎಂದಿದ್ದಾರೆ.
ಸ್ಟೇಡಿಯಂಗೆ ಪರ್ಮಿಷನ್ ಕೊಟ್ಟವರು ಪೊಲೀಸರು ಮತ್ತು ಡಿಪಿಎಆರ್ನವರು. ಪೊಲೀಸ್ ಇಲಾಖೆ, ಇಂಟೆಲಿಜೆನ್ಸ್ ಸಿಎಂ ಅಧೀನದಲ್ಲೇ ಬರುತ್ತದೆ. ಅವರ ಪಾಡಿಗೆ ಅವರನ್ನು ಸ್ಟೇಡಿಯಂಗೆ ಬಿಟ್ಟಿದ್ದರೆ ತೊಂದರೆ ಆಗುತ್ತಿರಲಿಲ್ಲ. ನಿಮ್ಮ ತಪ್ಪೇ ಇಲ್ಲ ಅಂದರೆ ಹಾಲಿ ಜಡ್ಜ್ ನೇತೃತ್ವದಲ್ಲಿ ತನಿಖೆ ಮಾಡಿಸಿ. ಇದರಲ್ಲಿ 11 ಜನ ಅಮಾಯಕರು ಬಲಿಯಾಗಿದ್ದಾರೆ ಎಂದು ಹೇಳಿದ್ದಾರೆ.