ಬೆಂಗಳೂರು: ಸರ್ಕಾರ ಸಮರ್ಪಕವಾಗಿ ಕಾರ್ಯನಿರ್ವಹಿಸಿ ಜನರ ನಿರೀಕ್ಷೆಗಳನ್ನು ಈಡೇರಿಸಲು ಸಮಯ ಬೇಕಾಗುತ್ತದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟಿದ್ದಾರೆ. ಹೆಚ್ಚುವರಿ ಖಾತೆಗಾಗಿ ತಾವು ಬೇಡಿಕೆ ಇಟ್ಟಿದ್ದನ್ನು ಒಪ್ಪಿಕೊಂಡ ಅವರು, ಕ್ರೀಡಾ ಇಲಾಖೆ ಸಿಕ್ಕಿದ್ದರೆ ರಾಜ್ಯವನ್ನು ಕ್ರೀಡಾ ಕ್ಷೇತ್ರದಲ್ಲಿ ದೇಶದಲ್ಲೇ ಮುಂಚೂಣಿಗೆ ತರುವ ಪ್ರಯತ್ನ ಮಾಡುತ್ತಿದ್ದೆವು ಎಂದು ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ತಾವು ಕ್ರೀಡಾ ಖಾತೆ ನೀಡುವಂತೆ ಮನವಿ ಮಾಡಿದ್ದೆ. ಆದರೆ ಆ ಖಾತೆಯನ್ನು ಬೇರೆ ಸಚಿವರಿಗೆ ಹಂಚಿಕೆ ಮಾಡಲಾಗಿದೆ. ಕ್ರೀಡಾ ಇಲಾಖೆ ದೊರೆತಿದ್ದರೆ ಹಲವು ಹೊಸ ಯೋಜನೆಗಳನ್ನು ಜಾರಿಗೊಳಿಸಿ ರಾಜ್ಯವನ್ನು ಕ್ರೀಡಾ ಕ್ಷೇತ್ರದಲ್ಲಿ ನಂಬರ್ ಒನ್ ಸ್ಥಾನಕ್ಕೆ ಕೊಂಡೊಯ್ಯುವ ಗುರಿ ಹೊಂದಿದ್ದೆವು ಎಂದು ತಿಳಿಸಿದರು.
ಹಿಂದೆ ಧರಂ ಸಿಂಗ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೂ ಕ್ರೀಡಾ ಖಾತೆಗಾಗಿ ಮನವಿ ಮಾಡಿದ್ದೆ. ಈ ಬಾರಿ ಆ ಖಾತೆಯನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರಿಗೆ ನೀಡಲಾಗಿದೆ. ಅವರಿಗೆ ಕ್ರೀಡೆ ಬಗ್ಗೆ ವಿಶೇಷ ಆಸಕ್ತಿ ಇರುವುದರಿಂದ ಖಾತೆ ಪಡೆದಿರಬಹುದು ಎಂದು ಹೇಳಿದರು.
ಸಿದ್ದರಾಮಯ್ಯ ಅವರ ವಿರುದ್ಧ ನಡೆದಿರುವ ಅಪಪ್ರಚಾರ ಹಾಗೂ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಸಾಮಾಜಿಕ ಜಾಲತಾಣಗಳ ಐಟಿ ಸೆಲ್ ಮೂಲಕ ಕೆಲವು ಅಪಪ್ರಚಾರಗಳು ನಡೆದಿವೆ. ಕಾಂಗ್ರೆಸ್ ಪಕ್ಷದ ಶಕ್ತಿ ಕುಗ್ಗಿಸುವ ಉದ್ದೇಶದಿಂದ ಇಂತಹ ಪ್ರಯತ್ನಗಳು ನಡೆದಿವೆ ಎಂದು ಆರೋಪಿಸಿದರು.
ಅಹಿಂದ ಸಮುದಾಯದ ಸಂಘಟನೆಯ ಬಗ್ಗೆ ಮಾತನಾಡಿದ ಅವರು, ಅಹಿಂದ ಶಕ್ತಿಯನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ. ಈ ಕೆಲಸದಲ್ಲಿ ಹಲವರು ತೊಡಗಿಸಿಕೊಂಡಿದ್ದಾರೆ. ಯತೀಂದ್ರ ಸಿದ್ದರಾಮಯ್ಯ ಈ ವಿಚಾರವನ್ನು ಹಿಂದೆ ಕೂಡ ಪ್ರಸ್ತಾಪಿಸಿದ್ದರು, ಈಗಲೂ ಅದನ್ನೇ ಹೇಳಿದ್ದಾರೆ. ಇದರಿಂದ ಪಕ್ಷಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿ ಹುದ್ದೆ ಕುರಿತ ಪ್ರಶ್ನೆಗೆ ಉತ್ತರಿಸಿದ ಸತೀಶ್ ಜಾರಕಿಹೊಳಿ, ಮುಖ್ಯಮಂತ್ರಿ ಆಗಲು ಪಕ್ಷದ ಅಧ್ಯಕ್ಷ ಸ್ಥಾನದಲ್ಲೇ ಇರಬೇಕೆಂಬ ನಿಯಮ ಇಲ್ಲ. ಪಕ್ಷಕ್ಕಾಗಿ ಕೆಲಸ ಮಾಡಿದವರಿಗೆ ಸೂಕ್ತ ಸಮಯದಲ್ಲಿ ಅವಕಾಶ ಮತ್ತು ಪ್ರತಿಫಲ ದೊರೆಯುತ್ತದೆ ಎಂದು ಹೇಳಿದರು.
ಶಿಗ್ಗಾಂವಿ ಹಾಗೂ ಬಾಗಲಕೋಟೆ ಕ್ಷೇತ್ರಗಳಲ್ಲಿ ಪಕ್ಷದ ಗೆಲುವಿನ ಉದಾಹರಣೆ ನೀಡಿದ ಅವರು, ಪಕ್ಷ ಸಂಘಟನೆಗೆ ಶ್ರಮಿಸಿದವರಿಗೆ ಫಲ ಸಿಗುವುದು ಸಹಜ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಹುದ್ದೆ ಕುರಿತು ನೀಡಿರುವ ಹೇಳಿಕೆಯಲ್ಲಿ ತಪ್ಪೇನಿಲ್ಲ. ಪಕ್ಷವನ್ನು ಗೆಲುವಿನತ್ತ ಕೊಂಡೊಯ್ಯುವವರಿಗೆ ಸೂಕ್ತ ಮಾನ್ಯತೆ ಸಿಗುತ್ತದೆ ಎಂದು ಹೇಳಿದರು.



