ಬೆಳಗಾವಿ: ಪೊಲೀಸರ ಸೋಗು ಹಾಕಿ, ಪತ್ರಕರ್ತರ ಮುಖವಾಡದಲ್ಲಿ ಗಾಂಜಾ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಸಿ ವ್ಯಕ್ತಿಯೊಬ್ಬರಿಂದ ₹60 ಸಾವಿರ ಸುಲಿಗೆ ಮಾಡಿದ ಆರೋಪದಡಿ ನಾಲ್ವರು ಯೂಟ್ಯೂಬರ್‌ಗಳನ್ನು ಹುಕ್ಕೇರಿ ಪೊಲೀಸರು ಬಂಧಿಸಿದ್ದಾರೆ.
ಜುಲೈ 18ರಂದು ಹುಕ್ಕೇರಿ ತಾಲೂಕಿನ ಕೋಟಭಾಗಿ ಗ್ರಾಮದ ಮಹಿಬೂಬ್ ಬಾಬುಸಾಬ್ ಜಮಾದಾರ್ ಎಂಬುವವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಬಲವಂತವಾಗಿ ಎರಡು ಗಾಂಜಾ ಪೊಟ್ಟಣಗಳನ್ನು ನೀಡಿ ₹1,000 ಪಡೆದಿದ್ದ. ಬಳಿಕ ಕೆಲವೇ ಸಮಯದಲ್ಲಿ ಕಾರಿನಲ್ಲಿ ಬಂದ ನಾಲ್ವರು ಆರೋಪಿಗಳು ತಮ್ಮನ್ನು ಪೊಲೀಸ್ ಅಧಿಕಾರಿಗಳೆಂದು ಪರಿಚಯಿಸಿಕೊಂಡು ಮಹಿಬೂಬ್ ಅವರನ್ನು ಕಬ್ಬಿನ ಗದ್ದೆಗೆ ಕರೆದೊಯ್ದಿದ್ದಾರೆ.
“ನೀನು ಗಾಂಜಾ ಮಾರಾಟ ಮಾಡುತ್ತಿದ್ದೀಯ” ಎಂದು ಬೆದರಿಸಿದ ಆರೋಪಿಗಳು, ಗಾಂಜಾ ಪೊಟ್ಟಣಗಳೊಂದಿಗೆ ಫೋಟೋ ಹಾಗೂ ವಿಡಿಯೋ ಚಿತ್ರೀಕರಿಸಿದ್ದಾರೆ. ನಂತರ ಹುಕ್ಕೇರಿ ಪೊಲೀಸ್ ಠಾಣೆ ಬಳಿ ಕರೆದುಕೊಂಡು ಹೋಗಿ, “ಪ್ರಕರಣ ದಾಖಲಿಸಿ ಹಿಂಡಲಗಾ ಜೈಲಿಗೆ ಕಳುಹಿಸುತ್ತೇವೆ, ಹಣ ಕೊಟ್ಟು ಪ್ರಕರಣ ಮುಗಿಸಿಕೊಳ್ಳಿ” ಎಂದು ಬೆದರಿಸಿ ₹2ರಿಂದ ₹3 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ಭಯಗೊಂಡ ಮಹಿಬೂಬ್ ಅವರಿಂದ ಅಂತಿಮವಾಗಿ ₹60 ಸಾವಿರ ನಗದು ಪಡೆದುಕೊಂಡಿದ್ದು, ಚಿತ್ರೀಕರಿಸಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ರಾಮರಾಜನ್, ಐಪಿಎಸ್ ಅವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು.
ಜುಲೈ 24ರಂದು ಕಾರ್ಯಾಚರಣೆ ನಡೆಸಿದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಹುಕ್ಕೇರಿ ಪಟ್ಟಣದ ಕಲ್ಲಪ್ಪ ಬಸವಣ್ಣಿ ಮಾಳಾಜ, ಚಿಕ್ಕೋಡಿ ತಾಲೂಕಿನ ನಾಗರಮುನ್ನೋಳಿಯ ಮಲ್ಲಿಕಾರ್ಜುನ ಸಿದ್ಧಪ್ಪ ಜುಲಫಿ, ಬೆಳಗಾವಿಯ ಪೃಥ್ವಿರಾಜ್ ನಾರಾಯಣ ಚೌಹಾಣ್ ಹಾಗೂ ಗಣೇಶಪುರದ ಡೇವಿಡ್ ಜಾಕೋಬ್ ತಂಗೇರಾಳ ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ ಮಾರುತಿ ಎರ್ಟಿಗಾ ಕಾರು, ಹೀರೋ ಎಚ್‌ಎಫ್ ಡಿಲಕ್ಸ್ ಬೈಕ್, ಎರಡು ಮೊಬೈಲ್ ಫೋನ್‌ಗಳು ಹಾಗೂ ಸುಲಿಗೆ ಮಾಡಿದ ₹34 ಸಾವಿರ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಹುಕ್ಕೇರಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.



