ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದಲ್ಲಿ ರಾಜೀನಾಮೆಗಳ ಸರಣಿ ಮುಂದುವರಿದಿದ್ದು, ರಾಜ್ಯಸಭಾ ಸಂಸದ ಪ್ರಕಾಶ್ ಚಿಕ್ ಬರೈಕ್ ತಮ್ಮ ಸದಸ್ಯತ್ವ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷದೊಂದಿಗೆ ಟಿಎಂಸಿ ವಿಲೀನವಾಗುವ ಕುರಿತು ರಾಜಕೀಯ ವಲಯದಲ್ಲಿ ಚರ್ಚೆಗಳು ನಡೆಯುತ್ತಿರುವ ನಡುವೆಯೇ ಈ ಬೆಳವಣಿಗೆ ನಡೆದಿದೆ. ಈಗಾಗಲೇ ಸುಖೇಂದು ಶೇಖರ್ ರಾಯ್ ಹಾಗೂ ಸುಷ್ಮಿತಾ ದೇವ್ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಪ್ರಕಾಶ್ ಚಿಕ್ ಬರೈಕ್ ಮೂರನೇ ಸಂಸದರಾಗಿದ್ದಾರೆ.
ಪ್ರಕಾಶ್ ಚಿಕ್ ಬರೈಕ್ ಅವರು ಗುರುವಾರ ಬೆಳಗ್ಗೆ 11 ಗಂಟೆಗೆ ಉಪರಾಷ್ಟ್ರಪತಿ ಹಾಗೂ ರಾಜ್ಯಸಭಾ ಸಭಾಪತಿಗಳಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದರು. ತಮ್ಮ ರಾಜೀನಾಮೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ವೀಕರಿಸುವಂತೆ ಅವರು ಮನವಿ ಮಾಡಿದ್ದಾರೆ.
ರಾಜೀನಾಮೆ ಪತ್ರದಲ್ಲಿ, ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಸಹಕಾರ ನೀಡಿದ ಉಪರಾಷ್ಟ್ರಪತಿಗಳು ಹಾಗೂ ರಾಜ್ಯಸಭಾ ಸಚಿವಾಲಯದ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿರುವುದಾಗಿ ಉಲ್ಲೇಖಿಸಿದ್ದಾರೆ.
ರಾಜೀನಾಮೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬರೈಕ್, ಪಶ್ಚಿಮ ಬಂಗಾಳದ ಜನರ ಅಭಿಪ್ರಾಯ ಮತ್ತು ಭಾವನೆಗಳಿಗೆ ಗೌರವ ನೀಡಿ ನಾನು ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ತಿಳಿಸಿದ್ದಾರೆ.



