ಎಸ್.ಬಿ.ಐ ವಿಮಾ ಕಂಪನಿಯಿಂದ ಸೇವಾ ನ್ಯೂನತೆ

0
grahaka ayoga
Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ : ಶಿರಸಿಯ ನೀಲಕುಂದ, ತಂಡಾಗುಡಿ ಪ್ರದೇಶದ ಅಡಿಕೆ ಬೆಳೆಗಾರ ರೈತರು 2017-18ರಲ್ಲಿ ಅಡಿಕೆ ಬೆಳೆಯನ್ನು ಬೆಳೆದಿದ್ದರು. ಆ ಬೆಳೆಗೆ ರೈತರು/ದೂರುದಾರರು ಕೆನರಾ ಕೋ-ಆಪ್‌ರೆಟಿವ್ ಸಂಘದೊಂದಿಗೆ ಎಸ್.ಬಿ.ಐನ ವಿಮಾ ಕಂಪನಿಗೆ ತಮ್ಮ ಅಡಿಕೆ ಬೆಳೆಗೆ 2017-18ರ ವರ್ಷಕ್ಕೆ ವಿಮೆ ಮಾಡಿಸಿದ್ದರು. ಮಳೆ ನಿಗದಿಗಿಂತ ಜಾಸ್ತಿಯಾಗಿ ಅತಿವೃಷ್ಠಿಯಾದರೆ ಆ ರೈತರು ವಿಮೆ ಪರಿಹಾರ ಪಡೆಯಲು ಅರ್ಹತೆ ಹೊಂದಿದ್ದರು.

Advertisement

ಜುಲೈ-2017ರಲ್ಲಿ ತಮ್ಮ ಬಾಗದಲ್ಲಿ ನಿರಂತರವಾಗಿ 4 ದಿವಸ 59 ಎಮ್‌ಎಮ್‌ಗಿಂತ ಹೆಚ್ಚಿನ ಮಳೆ ಆದ ಕಾರಣ ತಮ್ಮ ಅಡಿಕೆ ಬೆಳೆ ನಾಶವಾಗಿ ರೈತರಿಗೆ ಆರ್ಥಿಕ ತೊಂದರೆ ಮತ್ತು ಹಾನಿಯಾಗಿದೆ. ಕಾರಣ ವಿಮಾ ಪಾಲಿಸಿಯ ನಿಯಮದಂತೆ ತಮಗೆ ಬೆಳೆ ಹಾನಿ ಮತ್ತು ಪರಿಹಾರ ಕೊಡಲು 1ನೇ ಎದುರುದಾರ ಎಸ್.ಬಿ.ಐ ವಿಮಾ ಕಂಪನಿಗೆ ಹಲವ ಬಾರಿ ಕೇಳಿಕೊಂಡರೂ ಅವರು ತಮಗೆ ವಿಮಾ ಹಣ ಅಥವಾ ಪರಿಹಾರ ಕೊಟ್ಟಿಲ್ಲ.

ಅಂತಹ ವಿಮಾ ಕಂಪನಿಯವರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನತೆ ಆಗುತ್ತದೆ ಎಂದು ವಿಮಾ ಕಂಪನಿ ಮತ್ತು ಇತರೆಯವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒಟ್ಟು 473 ರೈತರು ಧಾರವಾಡದ ಜನಾದೇಶ ಗ್ರಾಹಕರ ಸ್ವಯಂ ಸೇವಾ ಸಂಘದ ಮೂಲಕ 27/05/2022ರಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಈ ದೂರಿನ ಬಗ್ಗೆ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ವಿಶಾಲಾಕ್ಷಿ ಅ.ಬೋಳಶೆಟ್ಟಿ ಹಾಗೂ ಪ್ರಭು ಸಿ. ಹಿರೇಮಠ ಕೂಲಂಕುಷವಾಗಿ ವಿಚಾರಣೆ ನಡೆಸಿದರು. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದವರು ದೂರುದಾರರ ಸ್ಥಳಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಮಳೆ ಬಿದ್ದ ಬಗ್ಗೆ ವರದಿ ಕೊಡಬೇಕಾಗಿತ್ತು.

ಆದರೆ ಅವರು 2017-18ನೇ ಇಸವಿಯಲ್ಲಿ ೬.೭ನಷ್ಟು ಮಳೆಯಾಗಿದೆ ಎಂದು ವರದಿ ಕೊಟ್ಟಿದ್ದರಿಂದ ದೂರುದಾರರು ಪ್ರಕೃತಿ ವಿಕೋಪದ ಆಧಾರದಲ್ಲಿ ವಿಮೆ ಪರಿಹಾರ ಪಡೆಯಲು ಅರ್ಹರಲ್ಲ ಎಂದು 1ನೇ ಎದುರುದಾರ/ಎಸ್.ಬಿ.ಐ. ವಿಮಾ ಕಂಪನಿಯವರು ಆಕ್ಷೇಪಣೆ ಎತ್ತಿದ್ದರು.

ಅತಿ ಹೆಚ್ಚು ಮಳೆಯಾಗಿದ್ದರೂ ಮಳೆ ಮಾಪನ ಕೇಂದ್ರಗಳು ಕಡಿಮೆ ಮಳೆ ದಾಖಲಿಸಿಕೊಂಡಿದ್ದ ಪ್ರಸಂಗದಲ್ಲಿ ಅಕ್ಕಪಕ್ಕ ಮಳೆ ಮಾಪನ ಕೇಂದ್ರಗಳ ವರದಿಗಳನ್ನು ಆಧರಿಸಿ 1ನೇ ಎದುರುದಾರ ವಿಮಾ ಕಂಪನಿಯವರು ದೂರುದಾರರ ವಿಮಾ ಅರ್ಜಿಗಳನ್ನು ಪರಿಶೀಲಿಸಿ ವಿಮಾ ಹಣಕೊಡಬೇಕು ಅನ್ನುವುದು ರಾಜ್ಯ ಸರ್ಕಾರದ ನಿಯಮ. ಈ ಪ್ರಕರಣದಲ್ಲಿ ಜುಲೈ-2017ರಲ್ಲಿ ದೂರುದಾರರ ಏರಿಯಾದಲ್ಲಿ ಅತೀ ಹೆಚ್ಚು ಮಳೆಯಾಗಿದೆ.

ಆದರೆ ತಾಂತ್ರಿಕ ದೋಷದಿಂದ ಅಲ್ಲಿಯ ಮಳೆ ಮಾಪನ ಕೇಂದ್ರದಲ್ಲಿ 6.7 ಎಂದು ದಾಖಲಾಗಿದೆ. ಮೇಲೆ ಹೇಳಿದ ರಾಜ್ಯ ಸರ್ಕಾರದ ನಿರ್ದೇಶನದಂತೆ ಪಕ್ಕದ ಮಳೆ ಮಾಪನ ಕೇಂದ್ರದಲ್ಲಿ 72 ಎಮ್.ಎಮ್‌ಗಿಂತ ಹೆಚ್ಚು ಮಳೆಯಾದ ಬಗ್ಗೆ ದಾಖಲೆ ಇದ್ದು, ಅದನ್ನು ಆಧರಿಸಿ ವಿಮಾ ಕಂಪನಿಯವರು ದೂರುದಾರರಿಗೆ ಬೆಳೆ ವಿಮೆ ಪರಿಹಾರ ಕೊಡಬೇಕಾಗಿತ್ತು.

ಆದರೆ ಆ ರೀತಿ ಮಾಡದೇ ದೂರುದಾರರ ವಿಮಾ ಕೋರಿಕೆಯ ಬಗ್ಗೆ ಏನನ್ನೂ ಹೇಳದೆ ಎದುರುದಾರ/ಎಸ್.ಬಿ.ಐ ವಿಮಾ ಸಂಸ್ಥೆಯವರು ಕರ್ತವ್ಯ ಲೋಪ ಎಸಗಿ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನತೆ ಎಸಗಿದ್ದಾರೆಂದು ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.

ಒಟ್ಟು 473 ರೈತರು/ದೂರುದಾರರು ಇದ್ದು ಅವರಿಗೆ 12 ಲಕ್ಷ 78 ಸಾವಿರ ರೂ ವಿಮಾ ಹಣ ಮತ್ತು ಅದರ ಮೇಲೆ ದೂರು ದಾಖಲಾದ ದಿನದಿಂದ ಶೇ.8ರಂತೆ ಪೂರ್ತಿ ಹಣ ಸಂದಾಯವಾಗುವವರೆಗೆ ಲೆಕ್ಕ ಹಾಕಿ ಕೊಡುವಂತೆ ಆಯೋಗ ಎಸ್.ಬಿ.ಐ ವಿಮಾ ಕಂಪನಿಗೆ ನಿರ್ದೇಶಿಸಿದೆ. ಎಲ್ಲ 473 ದೂರುದಾರ/ರೈತರಿಗೆ ಆಗಿರುವ ಅನಾನುಕೂಲ ಹಾಗೂ ಮಾನಸಿಕ ಹಿಂಸೆಗಾಗಿ ತಲಾ 2 ಸಾವಿರ ರೂ.ನಂತೆ ಒಟ್ಟು ರೂ. 9 ಲಕ್ಷ 46 ಸಾವಿರ ಪರಿಹಾರ ನೀಡುವಂತೆ ಆಯೋಗ ವಿಮಾ ಕಂಪನಿಗೆ ಆದೇಶಿಸಿದೆ. ಒಟ್ಟು ರೂ.30 ಸಾವಿರ ಪ್ರಕರಣಗಳ ಖರ್ಚು-ವೆಚ್ಚ ನೀಡಲು ಸಹ ಆಯೋಗ ವಿಮಾ ಕಂಪನಿಗೆ ತಿಳಿಸಿದೆ.


Spread the love

LEAVE A REPLY

Please enter your comment!
Please enter your name here