ವಿಜಯಸಾಕ್ಷಿ ಸುದ್ದಿ, ಗದಗ : ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣದ ವಿಚಾರಣೆ ನಡೆಸುತ್ತಿರುವ ಎಸ್‌ಐಟಿ ತನಿಖಾಕಾಧಿರಿಗಳ ವಿನಂತಿಯ ಮೇರೆಗೆ ದೂರುದಾರರು, ಸಾಕ್ಷಿದಾರರ ಗೌಪ್ಯತೆ ಕಾಪಾಡುವುದು ಮತ್ತು ರಕ್ಷಣೆ ನೀಡುವ ಉದ್ದೇಶದಿಂದ ಜನಪ್ರತಿನಿಗಳ ವಿಶೇಷ ನ್ಯಾಯಾಲಯವನ್ನು ವಿಚಾರಣೆ ಸಂದರ್ಭದಲ್ಲಿ ಮಾತ್ರ ಗುರುನಾನಕ ಭವನಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಿಸಲು ಅನುಮೋದಿಸಲಾಗಿದೆ ಎಂದು ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಗುರುವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ಬೇಲ್ ಪ್ರಕರಣ ವಿಚಾರಣೆಗೆ ಗುರುನಾನಕ ಭವನದಲ್ಲಿ ನ್ಯಾಯಾಲಯ ಸ್ಥಾಪಿಸಲಾಗಿತ್ತು.
ಅದೇ ಜಾಗದಲ್ಲಿ ಈ ಪ್ರಕರಣದ ವಿಚಾರಣೆ ನಡೆಯಲಿದೆ. ಈ ಸಂಬಂಧ ಹೈಕೋರ್ಟ್ಗೂ ಪತ್ರ ಬರೆದು ವಿನಂತಿಸಲಾಗಿದೆ ಎಂದು ತಿಳಿಸಿದರು.
ಸಂಸದ ಪ್ರಜ್ವಲ್ ಪ್ರಕರಣದ ವಿಚಾರಣೆ ನಡೆಯುತ್ತಿರುವ ನ್ಯಾಯಾಲಯದಲ್ಲಿ ಸ್ಥಳಾವಕಾಶದ ಕೊರತೆಯಿದೆ. ಪ್ರಕರಣದಲ್ಲಿ ನೊಂದ ಮಹಿಳೆಯರು, ಸಾಕ್ಷಿದಾರರಿಗೆ ಬೆದರಿಕೆ, ಆಮಿಷ ಒಡ್ಡುತ್ತಿರುವುದು ಕಂಡುಬಂದಿದೆ. ಕೆಲ ಸಂತ್ರಸ್ತೆಯರು ಅಪಹರಣಕ್ಕೂ ಒಳಗಾಗಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗುತ್ತಿದೆ.
ಹೀಗಿದ್ದರೂ, ದೂರುದಾರರು, ಸಾಕ್ಷಿದಾರರ ಗೌಪ್ಯತೆ ಕಾಪಾಡುವುದು ಸರಕಾರ ಮತ್ತು ತನಿಖಾ ತಂಡದ ಜವಾಬ್ದಾರಿಯಾಗಿದೆ. ಆ ಹಿನ್ನೆಲೆಯಲ್ಲಿ ನ್ಯಾಯಾಲಯವನ್ನು ವಿಚಾರಣೆ ದಿನದಂದು ಮಾತ್ರ ತಾತ್ಕಾಲಿಕವಾಗಿ ಸ್ಥಳಾಂತರಿಸಲು ಒಪ್ಪಿಗೆ ನೀಡಲಾಗಿದೆ ಎಂದರು.
ಅಂಬಾನಿ, ಅದಾನಿ ಕಾಂಗ್ರೆಸ್ಸಿಗೆ ಹಣ ಕೊಟ್ಟಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಹಣ ಕೊಟ್ಟಿದ್ದು ನಿಜವಾದರೆ ಪ್ರಧಾನಿ ಮೌನವಾಗಿರುವುದೇಕೆ? ತಕ್ಷಣ ತಪ್ಪಿತಸ್ಥರನ್ನು ಬಂಧಿಸಿ ಜೈಲಿಗೆ ಹಾಕಿ.
ಲೋಕಸಭೆ ಚುನಾವಣೆಯ ಕೊನೆಯ ಹಂತದವರೆಗೂ ಅಂಬಾನಿ, ಅದಾನಿಯನ್ನು ಕಾಂಗ್ರೆಸ್ ವಿರೋಧಿಸಿದೆ ಎಂದು ಸಚಿವರು ಹೇಳಿದರು.
ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ಬಣ್ಣದ ಆಧಾರದಲ್ಲಿ ಜನಾಂಗವನ್ನು ಪ್ರತ್ಯೇಕಿಸುವುದನ್ನು ಭಾರತೀಯ ಸಂಸ್ಕೃತಿ ಸಹಿಸುವುದಿಲ್ಲ. ಆಫ್ರಿಕನ್ ಜನರ ಜೊತೆ ಹೋಲಿಕೆ ಮಾಡಿದರೆ ಅಪಮಾನ ಮಾಡಿದಷ್ಟೆ ಅಲ್ಲ, ಆಫ್ರಿಕನ್ ಜನರನ್ನು ನೋಡುವ ಮನಸ್ಥಿತಿಯೂ ಹೊಂದಬಾರದು. ನಾನು ಶ್ಯಾಮ್ ಪತ್ರೋಡ ಅವರ ಹೇಳಿಕೆಯನ್ನು ಒಪ್ಪುವುದಿಲ್ಲ. ತಕ್ಷಣ ಅವರು ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಮತ್ತು ಜನರ ಕ್ಷಮೆ ಕೇಳಬೇಕು ಎಂದರು.