ಗೊಂದಲಗಳಿಲ್ಲದೇ ಪೂರ್ಣಗೊಂಡ ಮತದಾನ

0
hkp
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಶಾಂತಿಯುತವಾಗಿ ಪೂರ್ಣಗೊಂಡಿದ್ದು, ಬಹುದೊಡ್ಡ ಸಂಖ್ಯೆಯಲ್ಲಿ ಮತದಾರರು ಶಾಂತಿ-ಶಿಸ್ತು ಕಾಪಾಡಿಕೊಂಡು ಮತದಾನ ಮಾಡಿದ್ದಾರೆ. ಯಾವುದೇ ಗೊಂದಲ, ಗಲಾಟೆ ಪ್ರಕರಣ ದಾಖಲಾಗದೇ ಶಾಂತಿಯುತ ಮತದಾನ ನಡೆದಿದ್ದಕ್ಕೆ ಜನತೆಗೆ ಹಾಗೂ ಈ ಬಗ್ಗೆ ಜಾಗೃತಿ ಮೂಡಿಸಿದ ಅಧಿಕಾರಿಗಳಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ರಾಜ್ಯದ ಕಾನೂನು ಹಾಗೂ ಸಂಸದೀಯ ವ್ಯಹಾರಗಳ ಇಲಾಖೆ, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳಾ ಮತದಾರರು ಕಳೆದ ಬಾರಿಗಿಂತಲೂ ಈ ಬಾರಿ ಶೇ.4ಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮತದಾನ ಮಾಡಿದ್ದಾರೆ. ಪುರುಷ ಮತದಾರರು ಕೂಡ ಕಳೆದ ಬಾರಿಗಿಂತ ಶೇ.2ರಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಮತಚಲಾವಣೆ ಮಾಡಿದ್ದು, ಒಟ್ಟಾರೆ ಮತ ಪ್ರಮಾಣವೂ ಏರಿಕೆಯಾಗಿದೆ. ಮತದಾನದ ಪ್ರಮಾಣ ಹೆಚ್ಚಳವಾಗಿದ್ದು ಮತದಾರರು ಜಾಗೃತರಾಗಿದ್ದಾರೆ ಎಂದರು.

ಈ ಚುನಾವಣೆ ಬದುಕು-ಭಾವನೆಗಳ ಮಧ್ಯೆ, ಬಡವ-ಶ್ರೀಮಂತರ ನಡುವೆ ನಡೆದ ಚುನಾವಣೆಯಾಗಿದ್ದು, ಈ ಚುನಾವಣೆ ಗ್ಯಾರಂಟಿ ಯೋಜನೆಗೆ ‘ಜನಾಭಿಪ್ರಾಯ ಸಂಗ್ರಹ’ ಇದ್ದಂತೆ ಭಾಸವಾಗಿತ್ತು. ಈ ಚುನಾವಣೆಯಲ್ಲಿ ಮಾಧ್ಯಮದವರು ಕೂಡ ಉತ್ತಮವಾಗಿ ಸಹಕರಿಸಿದ್ದಾರೆ. ಸುದ್ದಿಗಳನ್ನು ಪ್ರಚುರ ಪಡಿಸಿದ್ದಕ್ಕೆ ವಿಶೇಷ ಧನ್ಯವಾದ ಸಲ್ಲಿಸುತ್ತೇನೆ ಎಂದರು.

ಚುನಾವಣೆ ಮುಗಿದ ಮರುದಿನ ನಾವು ವಾರ್ಡ್ವಾರು ಸಭೆ ಮಾಡಿದ್ದು, ಗದಗ-ಬೆಟಗೇರಿ ಅವಳಿ ನಗರದಲ್ಲಿ ಕಾಂಗ್ರೆಸ್ ಹೆಚ್ಚು ಮತ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಸಚಿವರು, ರೋಣ, ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿಯೂ ಮುನ್ನಡೆ ಸಾಧಿಸುವ ವಿಶ್ವಾಸವಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಗದಗ ಜಿ.ಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗುರಣ್ಣ ಬಳಗಾನೂರ, ನಗರಸಭೆ ಮಾಜಿ ಅಧ್ಯಕ್ಷ ಬಿ.ಬಿ. ಅಸೂಟಿ, ಗದಗ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹಾಗೂ ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ, ಪಕ್ಷದ ಜಿಲ್ಲಾ ವಕ್ತಾರ ಬಸವರಾಜ ಕಡೇಮನಿ, ಎಸ್.ಎನ್. ಬಳ್ಳಾರಿ, ಉಮರಫಾರೂಖ್ ಹುಬ್ಬಳ್ಳಿ, ನಗರಸಭೆ ಸದಸ್ಯ ಇಮ್ತಿಯಾಜ್ ಶಿರಹಟ್ಟಿ ಸೇರಿ ಹಲವರಿದ್ದರು.

ಪ್ರಸ್ತುತ ರಾಜ್ಯದಲ್ಲಿ, ಅದರಲ್ಲೂ ನಮ್ಮ ಭಾಗದಲ್ಲಿ ಮಳೆಯ ಕೊರತೆಯಿಂದಾಗಿ ಗದಗ-ಬೆಟಗೇರಿ ಅವಳಿ ನಗರದ ಸೇರಿ ಜಿಲ್ಲಾದ್ಯಂತ ಕುಡಿಯುವ ನೀರಿನ ಸ್ಥಿತಿ ಗಂಭೀರವಾಗಿದೆ. ನದಿ ಪಾತ್ರಗಳಲ್ಲಿಯೂ ನೀರಿನ ಸಮಸ್ಯೆಯುಂಟಾಗಿದೆ. ಸಿಂಗಟಾಲೂರು ಬ್ಯಾರೇಜ್‌ನಲ್ಲಿನ ಡೆಡ್ ಸ್ಟೋರೇಜ್ ನೀರನ್ನೇ ಇದೀಗ ಬಳಕೆ ಮಾಡಲಾಗುತ್ತಿದೆ. ಅವಳಿ ನಗರ ಸೇರಿ ಜಿಲ್ಲೆಯ ಜನ ನೀರನ್ನು ಮಿತವಾಗಿ ಬಳಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರು ಸಾರ್ವಜನಿಕರಿಗೆ ಮನವಿ ಮಾಡಿದರು.


Spread the love

LEAVE A REPLY

Please enter your comment!
Please enter your name here