ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ : ಪ್ರತಿ ಕುಟುಂಬದಲ್ಲಿ ಶಾಂತಿ, ಸಹನೆಯ, ಹೊಂದಾಣಿಕೆಯ ಸಮಾನ ಮನಸ್ಥಿತಿ ಇದ್ದಲ್ಲಿ ಮನೆಯು ನೆಮ್ಮದಿಯ ತಾಣವಾಗುತ್ತದೆ ಎಂದು ಹೂವಿನಹಡಗಲಿಯ ಗವಿಸಿದ್ದೇಶ್ವರ ಸಂಸ್ಥಾನ ಮಠದ ಹಿರಿ ಶಾಂತವೀರ ಮಹಾಸ್ವಾಮಿಗಳು ಕಿವಿಮಾತು ಹೇಳಿದರು.
ತಾಲೂಕಿನ ಅರಸೀಕೆರೆ ಗ್ರಾಮದ ಕೋಲಶಾಂತೇಶ್ವರ ಜನಕಲ್ಯಾಣ ಕೇಂದ್ರದಿಂದ ಬಸವ ಜಯಂತಿ ಪ್ರಯುಕ್ತ ಶುಕ್ರವಾರ ನಡೆದ 40ನೇ ವರ್ಷದ 34 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀಗಳು ಮಾತನಾಡಿದರು.
ಮದುವೆಯ ನಂತರ ಬರಿ ಸ್ವಾರ್ಥದಿಂದ ಜೀವಿಸದೆ ಅತ್ತೆ-ಮಾವಂದಿರನ್ನು ತಂದೆ-ತಾಯಿಯ ರೀತಿಯಲ್ಲಿ ನೋಡಿಕೊಳ್ಳಬೇಕು. ಆಧುನಿಕ ಸಮಾಜದಲ್ಲಿ ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿವೆ. ಒಗ್ಗಟ್ಟಿನಿಂದ ಇದ್ದಲ್ಲಿ ಜಗತ್ತನ್ನು ಗೆಲ್ಲಬಹುದು. ನವದಂಪತಿಗಳು ಬಸವಣ್ಣನವರ ತತ್ವಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದರು.
ಕೋಲಶಾಂತೇಶ್ವರ ಮಠದ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಸೇವಾ ಪ್ರಶಸ್ತಿ ಹಾಗೂ ಬಸವ ಗುರುಕಿರಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಾಂತಲಿಂಗ ದೇಶೀಕೇಂದ್ರ ಮಹಾ ಸ್ವಾಮಿಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು.
ವೈ.ಡಿ. ಅಣ್ಣಪ್ಪ, ಪ್ರಶಾಂತ್ ಪಾಟೀಲ್, ವೃಷಭೇಂದ್ರಯ್ಯ, ಇಟಗಳ್ಳಿ ಬಸವರಾಜ್, ಹೆಚ್ ಕೊಟ್ರೇಶ್, ಕೆ. ಬಸವರಾಜ್, ಎಂ. ಸುರೇಶ್, ವೆಂಕಟೇಶ್, ಮರಿಯಪ್ಪ ಪೂಜಾರ್, ಎ.ಹೆಚ್. ನವೀನ್ ಮುಂತಾದವರಿದ್ದರು.