ಭಾರತದ ಸಂಸ್ಕಾರ, ಸಂಸ್ಕೃತಿ ಮಾದರಿಯಾಗಿದೆ

0
boodeeshwar
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಅತ್ಯುನ್ನತವಾದ ಸಂಸ್ಕಾರ, ಸಂಸ್ಕೃತಿಗೆ ಜಗತ್ತಿನಲ್ಲಿಯೇ ಹೆಸರಾಗಿರುವ ಭಾರತಕ್ಕೆ ತನ್ನದೇ ಆದ ಹಿರಿಮೆ-ಗರಿಮೆಯ ಸ್ಥಾನವಿದೆ ಎಂದು ಹೊಸಳ್ಳಿಯ ಬೂದೀಶ್ವರ ಸಂಸ್ಥಾನಮಠದ ಜ.ಬೂದೀಶ್ವರ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಶುಕ್ರವಾರ ಗದುಗಿನ ಶಿರಡಿ ಸಾಯಿಬಾಬಾ ದೇವಸ್ಥಾನದ 17ನೇ ವಾರ್ಷಿಕೋತ್ಸವದ ನಿಮಿತ್ತ ಗದಗ-ಬೆಟಗೇರಿಯ ಶ್ರೀ ಶ್ರೀ ಶಿರಡಿ ಸಾಯಿಬಾಬಾ ಸತ್ಸಂಗ ಏರ್ಪಡಿಸಿದ್ದ ಶ್ರೀ ಶಿರಡಿ ಸಾಯಿಬಾಬಾರ ಧುನಿ ಶಿಲಾನ್ಯಾಸ, ಶ್ರೀ ಸಾಯಿ ಛಾಯಾಚಿತ್ರ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ತನಗರಿವಿಲ್ಲದೆ ಜಗತ್ತು ಭಾರತಕ್ಕೆ ಕೈಮುಗಿಯುತ್ತದೆ. ಇದಕ್ಕೆ ಕಾರಣ ಭಾರತದ ಸಂಸ್ಕಾರ, ಸಂಸ್ಕೃತಿ. ಮಹಾನ್ ತಪಸ್ವಿಗಳು, ತತ್ವಜ್ಞಾನಿಗಳು, ಧರ್ಮ ಗುರುಗಳು ಭದ್ರವಾದ ತತ್ವ ಸಂದೇಶ, ಸಂಸ್ಕಾರ, ಸಂಸ್ಕೃತಿಯನ್ನು ರೂಢಿಸಿದ್ದಾರೆ. ಜಗತ್ತು ಹೆಣ್ಣನ್ನು ಕೇವಲ ಭೋಗದ ವಸ್ತು ಎಂದುಕೊಳ್ಳುತ್ತಿದ್ದರೆ, ಆ ಹೆಣ್ಣಿನಲ್ಲಿ ತಾಯಿತನವನ್ನು, ದೈವತ್ವವನ್ನು, ಸಹೋದರತ್ವವನ್ನು ಕಂಡ ದೇಶ ಜಗತ್ತಿನ ಭೂಪಟದಲ್ಲಿ ಎಲ್ಲಿಯಾದರೂ ಇದ್ದರೆ ಅದು ನಮ್ಮ ಹೆಮ್ಮೆಯ ಭಾರತದಲ್ಲಿ ಮಾತ್ರ. ಅಂತಹ ಸಂಸ್ಕಾರ, ಸಂಸ್ಕೃತಿ ನಮ್ಮಲ್ಲಿದೆ ಎಂದರು.
ಧರ್ಮದ ಹಾದಿಯಲ್ಲಿ ನಾವು ಮುನ್ನಡೆದರೆ ಧರ್ಮ ಎಂದಿಗೂ ನಮ್ಮನ್ನು ಕೈಬಿಡದು. ಧರ್ಮಕಾರ್ಯ-ಪುಣ್ಯಕಾರ್ಯದ ಡಿಪಾಸಿಟ್ ಇದ್ದರೆ ಧರ್ಮ-ಪುಣ್ಯ ನಮ್ಮನ್ನು ರಕ್ಷಿಸುತ್ತದೆ. ಪಾಪ ಕಳೆದುಕೊಳ್ಳಲು ಪುಣ್ಯದ ಕೆಲಸ ಮಾಡಬೇಕಷ್ಟೇ. ಎಲ್ಲರೂ ದಾನ, ಧರ್ಮ, ಪುಣ್ಯದ ಕೆಲಸ ಮಾಡಿ ಎಂದರಲ್ಲದೆ, ಗದುಗಿನ ಶಿರಡಿ ಸಾಯಿಬಾಬಾ ಮಂದಿರ ಇಂತಹ ಕಾರ್ಯಕ್ಕೆ ಮುಂಚೂಣಿಯಲ್ಲಿದೆ. ಇಲ್ಲಿ ಧರ್ಮವಂತರು ಒಗ್ಗಟ್ಟಿನಿಂದ ಒಳ್ಳೆ ಕೆಲಸ ಮಾಡುತ್ತಿದ್ದಾರೆ. ಸಾಯಿಬಾಬಾ ಮಂದಿರ ಸಾಕಷ್ಟು ಅಭಿವೃದ್ಧಿಯಾಗಿದೆ ಧರ್ಮ ಜಾಗೃತಿ, ಜನ ಜಾಗೃತಿ ಮೂಡಿಸುವ ಕಾರ್ಯ ಮುನ್ನಡೆಯಲಿ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀ ಸಾಯಿ ಸಂಸ್ಥಾನ ಶಿರಡಿ ಕ್ಷೇತ್ರದ ಸೇವಾ ನಿವೃತ್ತ ಪುರೋಹಿತ ಬಾಳಾಸಾಹೇಬ ಜೋಶಿ, ಶ್ರೀ ಶಿರಡಿ ಸಾಯಿಬಾಬಾರ ಧುನಿ ಶಿಲಾನ್ಯಾಸ, ಭೂಮಿ ಪೂಜೆಯ ಧಾರ್ಮಿಕ ಸಾಂಪ್ರದಾಯಿಕ ವಿಧಿವಿಧಾನ ನೆರವೇರಿಸಿ ಮಾತನಾಡಿ, ಶೃದ್ಧಾಭಕ್ತಿಯಿಂದ ಸ್ಮರಣೆ, ಸಾಮಾಜಿಕ, ಧಾರ್ಮಿಕ ಕಾರ್ಯದಲ್ಲಿ ಮುನ್ನಡೆದರೆ ಬಾಬಾ ಶುಭಾಶೀರ್ವದಿಸಿ ಮುನ್ನಡೆಸುವರು ಎಂದರಲ್ಲದೆ ಗದುಗಿನ ಬಾಬಾ ಮಂದಿರ ಸುಂದರವಾಗಿ ನಿರ್ಮಾಣಗೊಂಡಿದೆ. ಭಕ್ತರನ್ನು ಆಕರ್ಷಿಸಿ ಸದ್ಭಾವನೆ ಮೂಡಿಸುತ್ತಿರುವದು ಅಭಿನಂದನೀಯ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಿರಡಿ ಸಾಯಿಬಾಬಾ ಸತ್ಸಂಗದ ಅಧ್ಯಕ್ಷ ಮಹೇಶಗೌಡ ತಲೇಗೌಡ್ರ ಸಾಯಿಬಾಬಾ ಮಂದಿರದ ಧರ್ಮ ಕಾರ್ಯಗಳನ್ನು ವಿವರಿಸಿದರು. ಡಾ. ಎಸ್.ಬಿ. ಶೆಟ್ಟರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ರವಿಶಂಕರ ಚಿಂಚಲಿ ನಿರೂಪಿಸಿ ವಂದಿಸಿದರು.
ವೇದಿಕೆಯ ಮೇಲೆ ಶಿರಡಿ ಸಾಯಿಬಾಬಾ ಸತ್ಸಂಗದ ಮಾಜಿ ಅಧ್ಯಕ್ಷ ಗಂಗಣ್ಣ ಕೋಟಿ, ಶಿರಡಿಯ ಅರ್ಚಕ ಅವಿನಾಶ ಸುಲಾಖೆ, ರಘುವೀರ ಫತ್ತೇಪೂರ, ಡಾ.ಎಸ್.ಬಿ.ಶೆಟ್ಟರ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಐ.ಕೆ. ಬಲೂಚಿಗಿ, ಕೆ.ನಾಗೇಶರಾವ್, ಉಮೇಶ ನಾಲ್ವಾಡ, ಸಂಜಯ ರೊದ್ದಂ, ದೀಪಕ ಸುಲಾಖೆ, ಡಾ. ಎಸ್.ಡಿ. ಯರಗೇರಿ, ಸಿದ್ದಣ್ಣ ಗೌರಿಪುರ, ರಾಮಣ್ಣ ಕಾಶಪ್ಪನವರ, ರವಿರಾಜ ಕೋಟಿ, ಸದಾಶಿವಪ್ಪ ವಾಲಿ, ಯಲ್ಲೋಸಾ ಹಬೀಬ, ರವಿಪ್ರಕಾಶ ರಡ್ಡಿ, ದುಂಡಪ್ಪ ಮಲ್ಲಾಡದ, ಜಗದೀಶ ಪೂಜಾರ ಸೇರಿದಂತೆ ಸಾಯಿಬಾಬಾ ಭಕ್ತಾಧಿಗಳು ಪಾಲ್ಗೊಂಡಿದ್ದರು.
ದೇವಮಾನವರಾಗಿದ್ದ ಶಿರಡಿ ಸಾಯಿಬಾಬಾ ಅವರು ಸಕಲರಲ್ಲಿ, ಸಕಲ ಪ್ರಾಣಿಜೀವಿಗಳಲ್ಲಿ ದೇವರ ಸ್ವರೂಪವನ್ನು ಕಾಣಬೇಕು. ಸಂಕಷ್ಟದಲ್ಲಿರುವವರಿಗೆ, ನಿರ್ಗತಿಕರಿಗೆ ಸಹಾಯ ಮಾಡಬೇಕು, ದಾನಧರ್ಮ ಮಾಡಬೇಕು ಎಂದು ಬೋಧಿಸುವ ಮೂಲಕ `ಸಬ್ ಕಾ ಮಾಲೀಕ ಏಕ್ ಹೈ’ ಎಂದು ಎಲ್ಲರಲ್ಲಿ ಸದ್ಭಾವನೆ ಮೂಡಿಸಿದವರು. ಬಾಬಾ ಸಂಕಷ್ಟದಲ್ಲಿರುವವರನ್ನು ಸಂರಕ್ಷಿಸು, ನೆರವು ನೀಡು, ಅಲ್ಲೇ ದರ್ಶನ ಕೊಡುವೆ, ಹಸಿದ ಹೊಟ್ಟೆಗೆ ಅನ್ನ ನೀಡುವದು ಮುಖ್ಯ ಎಂದು ಬೋಧಿಸಿದ್ದಾರೆ ಎಂದು ಜ.ಬೂದೀಶ್ವರ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

Spread the love
Advertisement

LEAVE A REPLY

Please enter your comment!
Please enter your name here