ಮಹಾರಥೋತ್ಸವಕ್ಕೆ ಸಾಕ್ಷಿಯಾದ ಭಕ್ತ ಸಮೂಹ

0
Maharathotsava of Sri J. Fakireshwar
Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಕೋಮು-ಸೌಹಾರ್ದತೆಯ ಹರಿಕಾರ, ದ್ವೇಷ ಬಿಡು-ಪ್ರೀತಿ ಮಾಡು ಎಂಬ ದಿವ್ಯ ಸಂದೇಶ ಸಾರಿ ಶಿರಹಟ್ಟಿಯಲ್ಲಿ ಸರ್ಪರೂಪಿಯಾಗಿ ನೆಲೆನಿಂತಿರುವ ಕರ್ತೃ ಶ್ರೀ ಜ.ಫಕೀರೇಶ್ವರರ ಮಹಾರಥೋತ್ಸವವು ಆಗಿ ಹುಣ್ಣಿಮೆಯ ದಿನವಾದ ಮೇ.23ರ ಸಂಜೆ 5 ಗಂಟೆ ಸುಮಾರಿಗೆ ಸಹಸ್ರಾರು ಭಕ್ತರ ಜಯಘೋಷಗಳ ನಡುವೆ ನೆರವೇರಿತು.

Advertisement

ಗುರುವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಶ್ರೀಮಠದ 13ನೇ ಪೀಠಾಧ್ಯಕ್ಷ ಜ.ಫ.ಸಿದ್ದರಾಮ ಶ್ರೀಗಳು ಸಂಪ್ರದಾಯದಂತೆ ಹರಿಪೂರ ಗ್ರಾಮದಿಂದ ಶಿರಹಟ್ಟಿ ಪಟ್ಟಣಕ್ಕೆ ಅದ್ದೂರಿ ಪುರಪ್ರವೇಶ ಕಾರ್ಯಕ್ರಮವು ಪಲ್ಲಕ್ಕಿ ಮಹೋತ್ಸವದೊಂದಿಗೆ ಜರುಗಿತು. ಮೇಗೇರಿ ಓಣಿಯಲ್ಲಿ ಕರ್ತೃ ಶ್ರೀ ಜ.ಫಕೀರೇಶ್ವರರ ಗದ್ದುಗೆಗೆ ಪೂಜೆಯನ್ನು ಸಲ್ಲಿಸಿ, ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ನಂತರ, ಶೆಟ್ಟರ ಮನೆಗಳಿಗೆ ತೆರಳಿ ಅಲ್ಲಿ ಪ್ರಸಾದವನ್ನು ಸ್ವೀಕರಿಸಿ ಸಂಜೆ 4.30ರ ಸುಮಾರಿಗೆ ಮತ್ತೆ ಪಲ್ಲಕ್ಕಿಯೊಂದಿಗೆ ಮೆರವಣಿಗೆಯು ಸಂಜೆ 5 ಗಂಟೆಯ ಹೊತ್ತಿಗೆ ಶ್ರೀಮಠವನ್ನು ತಲುಪಿದಾಗ ರಥೋತ್ಸವಕ್ಕೆ ಜ.ಫ.ಸಿದ್ದರಾಮ ಸ್ವಾಮೀಜಿ ಹಾಗೂ ಜ.ಫ.ದಿಂಗಾಲೇಶ್ವರ ಸ್ವಾಮೀಜಿ ಚಾಲನೆ ನೀಡಿದರು.

ಇಡೀ ಮಾನವ ಕುಲಕ್ಕೆ ದೇವನೊಬ್ಬ ನಾಮ ಹಲವು ಎಂಬ ತತ್ವದಡಿ ಸಮಾಜದಲ್ಲಿ ಸಾಮರಸ್ಯವನ್ನು ತರುವುದಕ್ಕಾಗಿ ಶ್ರೀ ಫಕೀರೇಶ್ವರರ ಹಿಂದೂ-ಮುಸ್ಲಿಂ ರಾಜರುಗಳಿಂದ ವಿವಿಧ ಬಿರುದಾವಳಿಗಳನ್ನು, ರತ್ನಖಚಿತ ಆಭರಣಗಳನ್ನು ಪಡೆದುಕೊಂಡು ಕೋಮು-ಸೌಹಾರ್ದತೆಯ ಹರಿಕಾರ ಎನಿಸಿಕೊಂಡಿದ್ದಾರೆ.

ಹಾಗೆಯೇ ರಥವು ಸಹ ಅದೇ ಮಾದರಿಯಲ್ಲಿ ನಮ್ಮ ರಾಷ್ಟ್ರಧ್ವಜದ ಬಣ್ಣಗಳಾದ ಕೇಸರಿ-ಬಿಳಿ-ಹಸಿರು ಬಣ್ಣದಿಂದ ಕಂಗೊಳಿಸುವುದರ ಮೂಲಕ ನಾವೆಲ್ಲರೂ ಒಂದೇ ಎಂಬ ಸಂದೇಶ ಸಾರುವುದಾಗಿದೆ.

ರಾಜಪೋಷಾಕು ಹಾಗೂ ರತ್ನಖಚಿತವಾದ ವಜ್ರ ವೈಢೂರ್ಯಗಳನ್ನು ಧರಿಸಿದ್ದ ಜ.ಫ.ಸಿದ್ದರಾಮಸ್ವಾಮೀಜಿ ಹಾಗೂ ಉತ್ತರಾಧಿಕಾರಿಗಳು ರಥದ ಗಾಲಿಗೆ ಕಾಯಿ ಒಡೆಯುವುದರ ಮೂಲಕ ಚಾಲನೆಯನ್ನು ನೀಡಿ ಸುಮಾರು 1 ಕಿಮೀ ದೂರದಲ್ಲಿರುವ ಪಾದಗಟ್ಟಿಯವರೆಗೂ ತೆರಳಿದರು.

ಈ ಸಂದರ್ಭದಲ್ಲಿ ಗಜರಾಜ ಸಮೇತ, ಒಂಟೆ, ನಂದೀಧ್ವಜ, ಸಮ್ಮಾಳ, ಡೊಳ್ಳು, ಝಾಂಜ್ ಮೇಳಗಳು ಸೇರಿದಂತೆ ಸಕಲ ವಾದ್ಯಗೋಷ್ಠಿಗಳು ಮೊಳಗಿದವು. ಬೆಳಿಗ್ಗೆಯಿಂದಲೇ ರಾಜ್ಯ ಹಾಗೂ ಹೊರರಾಜ್ಯಗಳಿಂದ ಸಹಸ್ರಾರು ಭಕ್ತರು ಆಗಮಿಸುತ್ತಲೇ ಇದ್ದರು. ಶ್ರೀಮಠದ ವಿಶಾಲವಾದ ಜಾಗೆಯಲ್ಲಿ ಬೀಡು ಬಿಟ್ಟು ರಥೋತ್ಸವವನ್ನು ವೀಕ್ಷಿಸಿದರು.

 


Spread the love

LEAVE A REPLY

Please enter your comment!
Please enter your name here